ಕಾಂಗ್ರೆಸ್ ಸೇರಿದ ಗಂಗಹನುಮಯ್ಯ ಹಾಗೂ ಶಾಂತಕುಮಾರಿ
ಬೆಂಗಳೂರು; ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಮುಂದುವರೆಯುತ್ತಲೇ ಇದೆ. ಇಂದೂ ಕೂಡಾ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಾಜಿ ಶಾಸಕ ಗಂಗಹನುಮಯ್ಯ ಹಾಗೂ ಬಿಬಿಎಂಪಿ ಮಾಜಿ ಮೇಯರ್ ಶಾಂತಕುಮಾರಿಯವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಶಾಂತಕುಮಾರಿಯವರು ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿದ್ದರು. ಆದ್ರೆ ಬಿಜೆಪಿ ಉಮೇಶ್ ಶೆಟ್ಟಿಗೆ ಟಿಕೆಟ್ ಘೋಷಣೆ ಮಾಡಿದೆ. ನನಗಿಂತ ಕಿರಿಯರಿಗೆ ಟಿಕೆಟ್ ಕೊಟ್ಟು ನನಗೆ ಅವಮಾನ ಮಾಡಲಾಗಿದೆ. ಇದಾದ ಮೇಲೂ ಪಕ್ಷದ ನಾಯಕರು ನನ್ನ ಜೊತೆ ಸೌಜನ್ಯಕ್ಕೂ ಮಾತನಾಡಲಿಲ್ಲ. ಇದರಿಂದ ಬೇಸತ್ತು ಕಾಂಗ್ರೆಸ್ ಸೇರಿದ್ದೇನೆ ಎಂದು ಶಾಂತಕುಮಾರಿ ಹೇಳಿದ್ದಾರೆ. ಇನ್ನು ಮಾಜಿ ಶಾಸಕ ಗಂಗಹನುಮಯ್ಯ ಕೂಡಾ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಅಧ್ಯಕ್ಷ ಪರಮೇಶ್ವರ್ ಸೇರಿ ಹಲವು ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.