BengaluruPolitics

ನಂದಿನಿ ಸಂಸ್ಥೆ ಮುಳುಗಿಸಲು ಯತ್ನ; ಡಿ.ಕೆ‌.ಸುರೇಶ್

ಬೆಂಗಳೂರು; ‘ಕನ್ನಡಿಗರು ಕಟ್ಟಿ ಬೆಳೆಸಿದ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಗಳನ್ನು ಮುಳುಗಿರುವ ಬಿಜೆಪಿ ಈಗ ಕನ್ನಡಿಗರ ಹೆಮ್ಮೆಯ ನಂದಿನಿ ಸಂಸ್ಥೆಯನ್ನು ಮುಳುಗಿಸಲು ಚುನಾವಣೆ ಸಮಯದಲ್ಲಿ ಬಿಲ ತೋಡುತ್ತಿದ್ದಾರೆ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರು ವಾಗ್ದಾಳಿ ನಡೆಸಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಸುರೇಶ್ ಮಾತನಾಡಿದರು.

‘ನಾವೆಲ್ಲರೂ ಚುನಾವಣೆ ಸಮಯದಲ್ಲಿದ್ದೇವೆ. ಜನರ ದೃಷ್ಟಿ ರಾಜಕಾರಣದತ್ತ ಇರುತ್ತದೆ. ಈ ಸಂದರ್ಭದಲ್ಲಿ ರಾಜ್ಯದೊಳಗೆ ಬೇರೆ ಬೇರೆ ರೂಪದಲ್ಲಿ ಮುಸುಳಲು ಪ್ರಯತ್ನವಾಗುತ್ತಿದೆ. ಇವರ ಪಾಲಿಗೆ ಕನ್ನಡಿಗರು ಎಂದರೆ ಇಷ್ಟೋಂದು ಕೀಳು ಮನೋಭಾವನೆಯೇ? ಕನ್ನಡಿಗರು, ಕನ್ನಡದ ರೈತರು ತಮ್ಮದೇ ಆದ ಗೌರವ ಸಂಪಾದಿಸಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಅತಿ ಹೆಚ್ಚು ಖಾಸಗಿ ಕ್ಷೇತ್ರ ಹೊಂದಿದ್ದ ರಾಜ್ಯ ಕರ್ನಾಟಕ. ನಂತರದ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು ಕರ್ನಾಟಕ. ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಹಾಗೂ ಕಾರ್ಪೋರೇಷನ್ ಬ್ಯಾಂಕ್ ಆರಂಭಿಸಿದ್ದವರು ಕನ್ನಡಿಗರು ಎಂದರು.

ದೇಶದಲ್ಲಿ ಸಹಕಾರಿ ಚಳುವಳಿ ಮೂಲಕ ಅತ್ಯುತ್ತಮವಾದ ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕುಗಳು, ಕೃಷಿ ಪತ್ತಿನ ಬ್ಯಾಂಕುಗಳನ್ನು ಕರ್ನಾಟಕ ಸ್ಥಾಪಿಸಿತ್ತು. ರೈತರಿಗೆ ನೆರವಾಗಲು ರಾಜ್ಯದಲ್ಲಿ ಕರ್ನಾಟಕ ಹಾಲು ಒಕ್ಕೂಟವನ್ನು ಸ್ಥಾಪಿಸಿ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಲಾಗುತ್ತಿದೆ ಎಂದು ಡಿ.ಕೆ.ಸುರೇಶ್ ಹೇಳಿದರು

ಸಹಕಾರಿ ಬ್ಯಾಂಕುಗಳಿಲ್ಲದಿದ್ದರೆ ರೈತರಿಗೆ ಬಡಿರಹಿತ ಸಾಲ ಸುಲಭವಾಗಿ ಸಿಗುವುದಿಲ್ಲ. ರೈತರ ಬದುಕು ಸುಧಾರಿಸಬೇಕು ಎಂದು ಕೃಷಿ ಜತೆಗೆ ಕೃಷಿಯ ಇತರೆ ಚಟುವಟಿಕೆಗಳನ್ನು ಮಾಡಬೇಕಾಗಿದೆ.

ರಾಜ್ಯದಲ್ಲಿ 28 ಲಕ್ಷ ರೈತ ಕುಟುಂಬಗಳು ಕ್ಷೀರ ಕ್ಷೇತ್ರವನ್ನು ಅವಲಂಬಿಸಿವೆ. ಅವರಿಗೆ ಇದರಿಂದ ಹೆಚಿನ ಆದಾಯ ಸಿಗದಿದ್ದರೂ ಪ್ರತಿ ಹದಿನೈದು ದಿನಕ್ಕೆ ಅವರಿಗೆ ಕುಟುಂಬ ನಿರ್ವಹಣೆಗೆ ಬೇಕಾದಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ 2.50 ಲಕ್ಷ ಮಂದಿ ಈ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಪ್ರಾಥಮಿಕ ಹಾಲು ಸಹಕಾರ ಸಂಘಗಳ ಮೂಲಕ ಸುಮಾರು 50 ಸಾವಿರ ಜನ ಉದ್ಯೋಗ ನಂಬಿಕೊಂಡು ಬದುಕುತ್ತಿದ್ದಾರೆ.

ಕರ್ನಾಟಕದ ಮೇಲೆ ಕೆಲವರು ಕಣ್ಣು ಹಾಕಿದ್ದು, ಚುನಾವಣೆ ಸಮಯದಲ್ಲಿ ಕರ್ನಾಟಕದೊಳಗೆ ನುಸುಳಲು ಬಿಲ ಹುಡುಕುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಅಮೂಲ್ ಎಂಬ ಸಹಕಾರಿ ಸಂಸ್ಥೆ ಮೂಲಕ ಮಾಡುತ್ತಿದ್ದಾರೆ. ಅಮೂಲ್ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದ್ದು, ಈ ಸಂಸ್ಥೆ ಮೇಲೆ ಮೇಲೆ ಸಾಕಷ್ಟು ಗೌರವವೂ ಇದೆ. ಆದರೆ ಕನ್ನಡಿಗರು, ಕೆಎಂಎಫ್ ಗುಜರಾತಿಗಳು ಹಾಗೂ ಸಹಕಾರ ಕ್ಷೇತ್ರಕ್ಕೆ ಯಾವ ಅನ್ಯಾಯ ಮಾಡಿದೆ ಎಂದು ಈ ರೀತಿ ಷಡ್ಯಂತ್ರ ರೂಪಿಸುತ್ತಿದ್ದಾರೆ ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Share Post