ಪತ್ನಿ ಯಾವಾಗಲೂ ನಿದ್ದೆ ಮಾಡ್ತಾಳೆ, ಊಟನೂ ಹಾಕಲ್ಲ; ಪತಿಯೊಬ್ಬನ ಅಳಲು
ಬೆಂಗಳೂರು; ಪತ್ನಿ ಯಾವಾಗಲೂ ನಿದ್ದೆ ಮಾಡ್ತಿರುತ್ತಾಳೆ. ಬೆಳಗ್ಗೆಯೂ ಡತವಾಗಿ ಏಳುತ್ತಾಳೆ. ಅಡುಗೆಯೂ ಮಾಡೋದಿಲ್ಲ ಎಂದು ಪತಿಯೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ. ಕಮ್ರಾನ್ ಖಾನ್ ಎಂಬಾತನೇ ದೂರು ನೀಡಿದ ವ್ಯಕ್ತಿ. ಐದು ವರ್ಷಗಳಿಂದ ನನ್ನ ಪತ್ನಿ ಆಯೇಷಾ ನನಗೆ ಕಿರುಕುಳ ನೀಡುತ್ತಿದ್ದಾಳೆ ಅಂತ ಕಮ್ರಾನ್ ಖಾನ್ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಆಯೇಷಾ ರಾತ್ರಿ ಬೇಗ ಮಲಗುತ್ತಾಳೆ. ಆದ್ರೆ ಎದ್ದೇಳುವಷ್ಟರಲ್ಲಿ ಮಾರನೇ ದಿನ 12.30 ಆಗಿರುತ್ತದೆ. ಸಂಜೆಯೂ ಕೂಡಾ 5.30 ರಿಂದ 9.30ರ ತನಕ ಮಲಗಿರುತ್ತಾಳೆ. ಹೀಗಾಗಿ ಆಕೆ ಅಡುಗೆಯೂ ಮಾಡುವುದಿಲ್ಲ. ನನ್ನ ತಾಯಿಗೆ ಅನಾರೋಗ್ಯವಿದ್ದರೂ ಅವರೇ ಅಡುಗೆ ಮಾಡುತ್ತಿದ್ದಾರೆ. ಪತ್ನಿಗೆ ಬುದ್ಧಿ ಹೇಳಿದರೆ ತವರು ಮನೆಯವರನ್ನು ಕರೆಸಿ ಜಗಳ ಮಾಡಿಸುತ್ತಾಳೆ. ಹುಟ್ಟುಹಬ್ಬಕ್ಕೆಂದು 25 ಜನರನ್ನು ಕರೆಸಿ ನನ್ನ ಮೇಲೆ ಹಲ್ಲೆ ನಡೆಸಿದ್ದಾಳೆ ಅಂತ ಕಮ್ರಾನ್ ಖಾನ್ ಆರೋಪಿಸಿದ್ದಾನೆ.