ಬಿಜೆಪಿಯಲ್ಲಿ ಅಸಮಾಧಾನಿತ ನಾಯಕರದ್ದೇ ತಲೆನೋವು; ಅಖಾಡಕ್ಕಿಳಿದ ಆರ್‌ಎಸ್‌ಎಸ್
ಬೆಂಗಳೂರು; ಬಿಜೆಪಿ ನಾಯಕರು ರಾಜ್ಯದಲ್ಲಿ ಈ ಬಾರಿ ಲಿಂಗಾಯತ ಮತಗಳ ಜೊತೆಗೆ ಒಕ್ಕಲಿಗರ ಮತಗಳ ಮೇಲೆ ಹೆಚ್ಚು ಗಮನ ನೆಟ್ಟಿದ್ದಾರೆ. ಅದ್ರಲ್ಲೂ ಹಳೇ ಮೈಸೂರು ಭಾಗ ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಿ ಕಮಲವನ್ನು ಅರಳಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ಹೀಗಿರುವಾಗಲೇ ಹಳೇ ಮೈಸೂರು ಭಾಗದ ಕೆಲ ನಾಯಕರು ಪಕ್ಷ ಬಿಡುವ ಮುನ್ಸೂಚನೆ ಸಿಗುತ್ತಿದೆ. ಇದು ಬಿಜೆಪಿ ಹೈಕಮಾಂಡ್‌ಗೆ ತಲೆನೋವಾಗಿದೆ. ಈಗಾಗಲೇ ಹಲವು ಬಿಜೆಪಿ ನಾಯಕರು ಪಕ್ಷ ಬಿಡಲು ತೀರ್ಮಾನಿಸಿರುವ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಹೀಗಿದ್ದರೂ ಅನುಮಾನ ಮಾತ್ರ ಹೋಗಿಲ್ಲ. ಹೀಗಾಗಿ ಆರ್‌ಎಸ್‌ಎಸ್ ಮುಖಂಡರು ಅಖಾಡಕ್ಕಿಳಿದಿದ್ದಾರೆ.. ಆರ್‌ಎಸ್‌ಎಸ್ ನಾಯಕರು ಅಸಮಾಧಾನಿತ ಬಿಜೆಪಿ ನಾಯಕರನ್ನು ಸಂಪರ್ಕಿಸಿ ಅವರ ಮನವೊಲಿಸುವ ಪ್ರಯತ್ ನಡೆಸಲಾಗುತ್ತಿದೆ.
ಕೆ.ಆರ್.ಪೇಟೆ ಶಾಸಕ ಹಾಗೂ ಸಚಿವ ನಾರಾಯಣಗೌಡ ಹಾಗೂ ಸಚಿವ ವಿ.ಸೋಮಣ್ಣ ಬಿಜೆಪಿ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಇಬ್ಬರೂ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ತೊರೆಯುತ್ತಾರೆಂಬ ಗುಮಾನಿ ಹಬ್ಬಿದೆ. ಇದಕ್ಕೆ ಪೂರಕ ಎಂಬಂತೆ ಇಬ್ಬರೂ ಸಚಿವರು ನಡೆದುಕೊಳ್ಳುತ್ತಿರುವ ರೀತಿ ಕೂಡಾ ಇದೆ. ಹೀಗಾಗಿ, ಈಗಾಗಲೇ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಇಬ್ಬರೂ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಇದೀಗ ಆರ್‌ಎಸ್‌ಎಸ್ ನಾಯಕರು ಅಖಾಡಕ್ಕಿಳಿದಿದ್ದಾರೆ. ಬಿ.ಎಲ್.ಸಂತೋಷ್ ಅವರು ನಿನ್ನೆ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಪಕ್ಷ ಬಿಡದಂತೆ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಇನ್ನು ಸಚಿವ ನಾರಾಯಾಣಗೌಡರನ್ನು ಕೂಡಾ ಬಿ.ಎಲ್.ಸಂತೋಷ್ ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಆರ್‌ಎಸ್‌ಎಸ್ ನಾಯಕರಿಗೂ ಬಗ್ಗದಿದ್ದರೆ ನೇರವಾಗಿ ರಾಷ್ಟ್ರೀಯ ನಾಯಕರೇ ಬಂದು ಸಮಾಧಾನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಅಂದಹಾಗೆ ಮಂಡ್ಯದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿತ್ತು. ನಾರಾಯಣಗೌಡರು ಜೆಡಿಎಸ್ ತೊರೆದು ಬಿಜೆಪಿ ಸೇರಿ, ಉಪಚುನಾವಣೆಯಲ್ಲಿ ಗೆದ್ದಿದ್ದರು. ಇದೀಗ ಬಿಜೆಪಿ ನಾಯಕರು ಮಂಡ್ಯದಲ್ಲಿ ಇನ್ನಷ್ಟು ಸೀಟು ಗಿಟ್ಟಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಸಂಸದೆ ಸುಮಲತಾ ಅವರ ಬೆಂಬಲ ಪಡೆದುಕೊಂಡಿದ್ದಾರೆ. ಹಲವು ಒಕ್ಕಲಿಗ ನಾಯಕರಿಗೆ ಮಣೆ ಹಾಕುತ್ತಿದ್ದಾರೆ. ಹೀಗಿರುವಾಗಲೇ ಪಕ್ಷದಲ್ಲಿರುವ ನಾಯಕರು ಹೊರಹೋಗೋದಕ್ಕೆ ಪ್ರಯತ್ನ ಮಾಡ್ತಿರೋದು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.