BengaluruCrime

ಮಾಡಾಳ್‌ಗೆ ತುರ್ತಾಗಿ ಜಾಮೀನು; ಸುಪ್ರೀಂಗೆ ವಕೀಲರ ಸಂಘ ಪತ್ರ

ಬೆಂಗಳೂರು; ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತುರ್ತಾಗಿ ವಿಚಾರಣೆ ಮಾಡಿರುವುದು ಹಾಗೂ ಒಂದೇ ದಿನದಲ್ಲಿ ಇತ್ಯರ್ಥಗೊಳಿಸಿ ಮಧ್ಯಂತರ ಜಾಮೀನು ಮಂಜೂರು ಮಾಡಿರುವ ನ್ಯಾಯಾಂಗದ ನಡೆಗೆ ವಕೀಲರ ಸಂಘ ತೀವ್ರ ಆಘಾತ ವ್ಯಕ್ತಪಡಿಸಿದೆ.

ನ್ಯಾಯಾಂಗದ ಈ ಪರಿಸ್ಥಿತಿಯ ಬಗ್ಗೆ ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಪ್ರಧಾನ ಕಾರ್ಯದರ್ಶಿ ಟಿಜಿ ರವಿ ಮತ್ತು ಖಜಾಂಚಿ ಹರೀಶ್, ಕೋರ್ಟ್ ಗಳಲ್ಲಿನ ವಿಐಪಿ ಸಂಪ್ರದಾಯದ ಬಗ್ಗೆ ಅಸಮಾಧಾನ ಹೊರಹಾಕಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಗೆ ಪತ್ರ ಬರೆದಿದಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದಲ್ಲಿ ವಿಚಾರಣೆ, ಜಾಮೀನು ಮಂಜೂರು ಸೇರಿದಂತೆ ಅರ್ಜಿಯನ್ನು ತ್ವರಿತವಾಗಿ ಇತ್ಯರ್ಥಗೊಳಿಸಿರುವುದನ್ನು ಉಲ್ಲೇಖಿಸಿ ಬರೆದಿರುವ ಪತ್ರದಲ್ಲಿ ವಕೀಲರ ಸಂಘ ” ಇಂದು ನ್ಯಾಯಮೂರ್ತಿ ಕೆ ನಟರಾಜನ್ ಅವರಿದ್ದ ಏಕಸದಸ್ಯಪೀಠ, ನಡೆಸಿರುವ ಪ್ರಕ್ರಿಯೆ ನ್ಯಾಯಾಂಗದ ಬಗ್ಗೆ ಜನಸಾಮಾನ್ಯರಿಗೆ ಇರುವ ನಂಬಿಕೆಯನ್ನು ಬುಡಮೇಲು ಮಾಡಿದೆ ಎಂದು ಅಸಮಾಧಾನ ಹೊರಹಾಕಿದೆ.

ಹೈಕೋರ್ಟ್ ನ ಸಾಮಾನ್ಯ ಪ್ರಕ್ರಿಯೆಯಲ್ಲಿ ಹೊಸ ಪ್ರಕರಣಗಳು ಪ್ರಮುಖವಾಗಿ ನಿರೀಕ್ಷಣಾ ಜಾಮೀನು ಅರ್ಜಿ ದಾಖಲಾದರೆ, ಅದು ನ್ಯಾಯಪೀಠದ ಎದುರು ವಿಚಾರಣೆಗೆ ಬರುವುದಕ್ಕೆ ವಾರಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ವಿಐಪಿಗಳ ಪ್ರಕರಣವನ್ನು ಮಾತ್ರ ಒಂದೇ ದಿನದಲ್ಲಿ ಇತ್ಯರ್ಥಗೊಳಿಸಲಾಗುತ್ತದೆ. ಮಾಡಾಳ್ ವಿರೂಪಾಕ್ಷಪ್ಪ ಅರ್ಜಿ ವಿಚಾರಣೆಯಲ್ಲಿ ನಡೆದುಕೊಂಡಂತೆಯೇ ಕೋರ್ಟ್ ಜನಸಾಮಾನ್ಯರ ವಿಷಯದಲ್ಲಿಯೂ ನಡೆದುಕೊಳ್ಳುವಂತಾಗಬೇಕು, ಅದಕ್ಕಾಗಿ ಹೈಕೋರ್ಟ್ ನಲ್ಲಿರುವ ಎಲ್ಲಾ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಒಂದೇ ದಿನದಲ್ಲಿ ನ್ಯಾಯಪೀಠದ ಎದುರು ವಿಚಾರಣೆಗೆ ನಿಗದಿಯಾಗುವಂತೆ ಪೋಸ್ಟ್ ಮಾಡಲು ರಾಜ್ಯ ಮುಖ್ಯನ್ಯಾಯಮೂರ್ತಿಗಳು ರಿಜಿಸ್ಟ್ರಿ ಕಚೇರಿಗೆ ನಿರ್ದೇಶನ ನೀಡುವಂತಾಗಬೇಕು ಎಂದು ಸಿಜೆಐ ಗೆ ಬರೆದಿರುವ ಪತ್ರದಲ್ಲಿ ವಕೀಲರ ಸಂಘ ಮನವಿ ಮಾಡಿದೆ.

Share Post