ಬಿಜೆಪಿಯವರು ನಿಜವಾದ ಧರ್ಮದ್ರೋಹಿಗಳು: ದಿನೇಶ್ ಗುಂಡೂರಾವ್
ಬೆಂಗಳೂರು: ಬಿಜೆಪಿಯವರು ಭಗವದ್ಗೀತೆಯ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ಮನುಷ್ಯ ದ್ವೇಷ ಪಸರಿಸುವ ಮೂಲಕ ನಿಜವಾದ ಧರ್ಮದ್ರೋಹಿಗಳಾಗಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯದ ಅಭಿವೃದ್ಧಿಯನ್ನು ಕಾಲ ಕಸ ಮಾಡಿಕೊಂಡಿರುವ ರಾಜ್ಯ ಸರ್ಕಾರ ಹಿಜಾಬ್, ಹಲಾಲ್, ವ್ಯಾಪಾರ ನಿಷೇಧದ ಭಜನೆ ಮಾಡುತ್ತಿದೆ. ಸಾಧನೆಯ ಆಧಾರದಲ್ಲಿ ಜನರ ಮುಂದೆ ಹೋಗಲು ಈ ಸರ್ಕಾರಕ್ಕೆ ಮುಖವಿಲ್ಲ. ಹಾಗಾಗಿ ಮುಗ್ದ ಜನರಿಗೆ ಧರ್ಮದ ಕಣ್ಕಾಪು ಕಟ್ಟಿ ಮೂರ್ಖರನ್ನಾಗಿಸುತ್ತಿದೆ. ಧರ್ಮದ ಅಮಲು ತಲೆಗೇರಿಸಿಕೊಂಡಿರುವ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವೇ? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ಈ ಸರ್ಕಾರದಲ್ಲಿ ಶೇ 40ರಷ್ಟು ಕಮೀಷನ್ ದಂಧೆ ನಿರಂತರವಾಗಿ ನಡೆಯುತ್ತಿದೆ. ಸಚಿವ ಈಶ್ವರಪ್ಪ ಕಮೀಷನ್ ಕೇಳಿದ ಬಗ್ಗೆ ಗುತ್ತಿಗೆದಾರರೊಬ್ಬರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆದರೂ ಈಶ್ವರಪ್ಪ ವಿರುದ್ಧ ಯಾವುದೇ ಕ್ರಮವಿಲ್ಲ. ಸಂಪುಟದಲ್ಲಿ ಲಂಚಕೋರರ ಗುಂಪೇ ಇದೆ. ಕಮೀಷನ್ ದಂಧೆಯ ವಿಚಾರ ಮರೆಮಾಚಲು ಈ ಸರ್ಕಾರ ಧರ್ಮದ ಅಸ್ತ್ರ ಬಳಸಿ ನಾಟಕವಾಡುತ್ತಿದೆ’ ಎಂದು ದಿನೇಶ್ ಗೂಂಡುರಾವ್ ಟೀಕಿಸಿದ್ದಾರೆ.