ಕಾಂಗ್ರೆಸ್ ಕೊಟ್ಟ ಗ್ಯಾರೆಂಟಿ ಕಾರ್ಡ್ಗೇ ಗ್ಯಾರೆಂಟಿ ಇಲ್ಲ; ಸಿಎಂ ಬೊಮ್ಮಾಯಿ
ಮೈಸೂರು; ಬಡವರ ಪರವಾಗಿ ನಮ್ಮ ಹೃದಯ ಮಿಡಿಯುತ್ತದೆ. ನಾವು ಎಸ್ಸಿ, ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳ ಮಾಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಪಕ್ಷ ಇಷ್ಟು ವರ್ಷ ಈ ಸಮುದಾಯಗಳನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡಿದ್ದವು ಎಂದು ಆಪಾದಿಸಿದರು.
ವಿರೋಧ ಪಕ್ಷಗಳು ಮೀಸಲಾತಿ ಹೆಚ್ಚಳಕ್ಕೆ ಬೆಂಬಲ ಕೊಡುವ ಬದಲು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿವೆ. ಮೀಸಲಾತಿ ಹೆಚ್ಚಳ ಅನುಷ್ಠಾನ ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ. ಆದರೆ ನಾವು ಕಳೆದ ನಲವತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಎಸ್ಸಿ ಎಸ್ಟಿ ಸಮುದಾಯದ ಮೀಸಲಾತಿಯನ್ನು ಹೆಚ್ಚಳ ಮಾಡಿದ್ದೇವೆ. ಇದನ್ನು ಪ್ರತಿಪಕ್ಷ ನಾಯಕರಿಗೆ ಸಹಿಸಿಕೊಳ್ಳಲಾಗ್ತಿಲ್ಲ ಎಂದು ಸಿಎಂ ಹೇಳಿದರು. ಕೇವಲ ಭಾಷಣ, ಹೇಳಿಕೆಗಳಿಂದ ಅಹಿಂದ ಸಮುದಾಯಗಳ ಉದ್ಧಾರ ಆಗುವುದಿಲ್ಲ. ಕೆಲವರು ಬೇಕಾಬಿಟ್ಟಿ ಆಶ್ವಾಸನೆ ಕೊಡುತ್ತಿದ್ದಾರೆ. 2000 ರೂಪಾಯಿ ಕೊಡುತ್ತೇವೆ ಅಂಥ ಗ್ಯಾರಂಟಿ ಕಾರ್ಡ್ ಕೊಡ್ತಿದ್ದಾರೆ. ಆದರೆ ಆ ಕಾರ್ಡ್ ಗೆ ಗ್ಯಾರಂಟ್ಟಿನೇ ಇಲ್ಲ ಎಂದು ಲೇವಡಿ ಮಾಡಿದರು.
ಕೋವಿಡ್ ನಂತಹ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮನ್ನೆಲ್ಲ ಕಾಪಾಡಿದರು. ಪ್ರತಿಯೊಬ್ಬರಿಗೂ ಎರಡು ಬಾರಿ ಕೊರೊನಾ ವ್ಯಾಕ್ಸಿನ್ ನೀಡಲಾಯಿತು. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾವು ಧನ್ಯವಾದಗಳನ್ನು ಹೇಳುತ್ತೇವೆ. ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಸಹ ಕೋವಿಡ್ ಸಮಯದಲ್ಲಿ ಜನರ ನೆರವಿಗೆ ಧಾವಿಸಿದರು. ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆ ಅನುಷ್ಠಾನಕ್ಕೆ ತಂದು ರೈತರ ನೆರವಿಗೆ ಮುಂದಾಗಿದೆವು ಎಂದು ಹೇಳಿದರು.