BengaluruHistory

ಶ್ರೀಮಂತರ ಬಡಾವಣೆ ಸದಾಶಿವನಗರಕ್ಕೆ ಈ ಹೆಸರು ಬಂದಿದ್ದು ಹೇಗೆ..?

ಸದಾಶಿವನಗರ.. ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲೊಂದು. ಇಲ್ಲಿ ಶ್ರೀಮಂತರು, ರಾಜಕಾರಣಿಗಳು, ಉದ್ಯಮಿಗಳು, ಸೆಲೆಬ್ರಿಟಿಗಳೇ ವಾಸವಿದ್ದಾರೆ. ಆದರೆ ಈ ಬಡಾವಣೆಗೆ ಸದಾಶಿವ ನಗರ ಎಂದು ಹೆಸರು ಬರಲು ಕಾರಣ ಬಹುತೇಕರಿಗೆ ಗೊತ್ತೇ ಇಲ್ಲ. ಆ ಬಡಾವಣೆಯಲ್ಲಿ ವಾಸವಿರುವ ಎಷ್ಟೋ ಜನಕ್ಕೆ ಸದಾಶಿವ ನಗರ ಎಂಬ ನಾಮಕರಣದ ಹಿಂದಿನ ಕಾರಣ ತಿಳಿದೇ ಇಲ್ಲ.

ಅಂದಹಾಗೆ, ಈ ಹೆಸರು ಬರಲು ಕಾರಣ ದೇಶಕಂಡ ಮಹಾನ್‌ ದೇಶಭಕ್ತ ಸದಾಶಿವರಾವ್.‌ ಕರ್ನಾಡ್‌ ಸದಾಶಿವರಾವ್‌ ಹೆಸರನ್ನೇ ಈ ಬಡಾವಣೆಗೆ ನಾಮಕರಣ ಮಾಡಲಾಗಿದೆ. ಅತಿಶ್ರೀಮಂತರ ಮನೆಯಲ್ಲಿ ಹುಟ್ಟಿದ ಸದಾಶಿವರಾವ್‌, ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಈ ಕಾರಣಕ್ಕಾಗಿ ಈ ಬಡಾವಣೆಗೆ ಸದಾಶಿವನಗರ ಎಂದು ನಾಮಕರಣ ಮಾಡಲಾಯಿತು.

ಸದಾಶಿವರಾವ್‌ ಅವರು ದಕ್ಷಿಣ ಭಾರತದ ಗಾಂಧಿ ಎಂದೇ ಹೆಸರಾಗಿದ್ದರು. ಗಾಂಧೀಜಿಯವರ ಪ್ರಭಾವಕ್ಕೊಳಗಾಗಿದ್ದ ಅವರು, ಸತ್ಯ, ನಿಷ್ಠೆಯನ್ನು ಪಾಲಿಸುತ್ತಾ ಮಹಾತ್ಮಾ ಗಾಂಧೀಜಿಯವರಿಗೆ ಆಪ್ತರಾಗಿದ್ದರು. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಮೊದಲು ಯಾರಾದರೂ ಸ್ವಾತಂತ್ರ್ಯ ಸಂಗ್ರಾಮಕ್ಕೆ ಚಾಲನೆ ಕೊಟ್ಟರು ಅಂದರೆ ಅದು ಸದಾಶಿವರಾವ್‌ ಅವರೇ. ಹೀಗಾಗಿಯೇ ಸದಾಶಿವರಾವ್‌ ದಕ್ಷಿಣ ಭಾರತದ ಗಾಂಧಿ ಎನಿಸಿಕೊಂಡಿದ್ದರು.

ಮಂಗಳೂರಿನ ಕಾರ್ನಾಡಿನವರಾದ ಸದಾಶಿವರಾವ್..‌

  ಸದಾಶಿವರಾವ್‌ ಹುಟ್ಟಿದ್ದು ೧೮೮೧ರಲ್ಲಿ. ವಕೀಲರಾದ ರಾಮಚಂದ್ರ ರಾವ್‌ ಹಾಗೂ ರಾಧಾಬಾಯಿ ದಂಪತಿಯ ಪುತ್ರ. ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ, ಹುಟ್ಟಿನಿಂದಲೇ ಸದಾಶಿವರಾವ್‌ ಅವರಿಗೆ ಬಡವರೆಂದರೆ ಬಲು ಪ್ರೀತಿ. ಬಡ ಮಕ್ಕಳಿಗೆ ಸಹಾಯ ಮಾಡುತ್ತಲೇ ಬೆಳೆದರು.

ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವಿ ಪಡೆದ ಕಾರ್ನಾಡ್ ಸದಾಶಿವ ರಾವ್, ನಂತರ ಬಾಂಬೆಯಲ್ಲಿ ಕಾನೂನು ಅಭ್ಯಾಸ ಮಾಡಿದರು. ಕಾನೂನು ಪದವಿಯೊಂದಿಗೆ ಮಂಗಳೂರಿಗೆ ಹಿಂತಿರುಗಿದ ಅವರು, 1906 ರಲ್ಲಿ ಅಪ್ಪನಂತೆ ವಕೀಲಿ ವೃತ್ತಿ ಆರಂಭಿಸಿದರು. ಇದರ ಜೊತೆಜೊತೆಗೇ ಹಿಂದುಳಿದ ವರ್ಗದವರು ಹಾಗೂ ವಿಧವೆಯರ ಪರವಾಗಿ ಹೋರಾಟ ಮಾಡಿದ ಸದಾಶಿವರಾವ್‌, ಬಡ ಜನರ ಮೆಚ್ಚುಗೆಯನ್ನು ಗಳಿಸಿದ್ದರು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ

ಗಾಂಧೀಜಿ ಎಂದರೆ ಅತ್ಯಂತ ಅಭಿಮಾನದಿಂದ ನೋಡುತ್ತಿದ್ದ ಸದಾಶಿವರಾವ್‌ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ದಂಡಿ, ಉಪ್ಪಿನ ಸತ್ಯಾಗ್ರಹಗಳಲ್ಲಿ ಪಾಲ್ಗೊಂಡಿದ್ದರು.  ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮವನ್ನು ಆರಂಭಿಸಿದ ಸದಾಶಿವರಾವ್‌ ಅವರ ನೇತೃತ್ವದಲ್ಲಿ ಹಲವಾರು ಚಳವಳಿಗಳು ನಡೆದವು.

ಸಾಯುವಾಗ ಬಿಡಗಾಸೂ ಇರಲಿಲ್ಲ..!

ಶ್ರೀಮಂತರಾಗಿಯೇ ಹುಟ್ಟಿದ್ದ ಸದಾಶಿವರಾವ್‌ ಹೋರಾಟಗಳಿಗಾಗಿಯೇ ತಮ್ಮ ಇಡೀ ಆಸ್ತಿಯನ್ನು ಕಳೆದುಕೊಂಡರು. ಅಪಘಾತಗಳಲ್ಲಿ ತಮ್ಮ ಪ್ರೀತಿ ಪಾತ್ರರು ತೀರಿಕೊಂಡರು. ಕೊನೇ ದಿನಗಳಲ್ಲಿ ಸದಾಶಿವರಾವ್‌ ಅವರ ಬಳಿ ಬಿಸಿಗಾಸೂ ಇರಲಿಲ್ಲ. ವಿಪರೀತ ಜ್ವರದಿಂದ ಬಳಲುತ್ತಿದ್ದ ಸದಾಶಿವರಾವ್‌, ೧೯೩೭೭ ಜನವರಿ ೯ರಂದು ಸಾವನ್ನಪ್ಪಿದರು. ಆಗ ಸದಾಶಿವ ರಾವ್ ಅವರ ಶವಸಂಸ್ಕಾರಕ್ಕೂ ದುಡ್ಡು ಇರಲಿಲ್ಲವಂತೆ. ಹೀಗೆ ದೇಶಕ್ಕಾಗಿ ಇಡೀ ಬದುಕನ್ನೇ ಮುಡಿಪಿಟ್ಟ ಸದಾಶಿವರಾವ್‌ ಅವರ ನೆನಪಿಗಾಗಿ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗೆ ಸದಾಶಿವನಗರ ಎಂದು ಹೆಸರಿಡಲಾಯಿತು. ಜೊತೆಗೆ ಮಂಗಳೂರಿನ ರಸ್ತೆಯೊಂದಕ್ಕೆ ಕೆ.ಎಸ್‌.ರಾವ್‌ ರಸ್ತೆ ಎಂದು ಹೆಸರಿಡಲಾಗಿದೆ.

 

Share Post