DistrictsPolitics

ರಾಜ್ಯದ ಅಭಿವೃದ್ಧಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ; ಡಿ.ಕೆ.ಶಿವಕುಮಾರ್‌

ಚಿಕ್ಕಬಳ್ಳಾಪುರ; ಜನರ ನೋವು, ಸಂಕಟ ತಿಳಿದು, ಅವರ ಅಭಿಪ್ರಾಯ ಪಡೆದುಕೊಂಡು ಅವುಗಳಿಗೆ ಪರಿಹಾರ ನೀಡಲು ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದೇವೆ. ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡ ಬೆಳಗಾವಿಯಿಂದ ಈ ಯಾತ್ರೆ ಆರಂಭಿಸಿದ್ದೇವೆ. ಇದುವರೆಗೂ ಸುಮಾರು 17 ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿದ್ದು, ಎಲ್ಲಿ ಹೋದರೂ ಜನಸಾಗರ. ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಧ್ವನಿ ನೀಡಲು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ನಡೆದ ಜನಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಈ ರಾಜ್ಯಕ್ಕೆ ಅತ್ಯುತ್ತಮ ಆಡಳಿತ ನೀಡಿದ ಪರಿಣಾಮ ವಿಶ್ವದ ನಾಯಕರು ಬೆಂಗಳೂರು ಹಾಗೂ ಕರ್ನಾಟಕದ ಮೂಲಕ ಭಾರತ ದೇಶವನ್ನು ನೋಡುತ್ತಿದ್ದರು. ಇಲ್ಲಿನ ಅಭಿವೃದ್ಧಿ ಗಮನಿಸಿ ನಮಗೆ ಗೌರವ ನೀಡುತ್ತಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆಗೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಗಮಿಸಿದ್ದರು. ಆಗ ವಾಜಪೇಯಿ ಅವರು ಇಷ್ಟು ದಿನಗಳ ಕಾಲ ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದುನಂತರ ದೇಶದ ಇತರೆ ನಗರಗಳಿಗೆ ಹೋಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಮೊದಲು ಬೆಂಗಳೂರಿಗೆ ಬಂದು ನಂತರ ಬೇರೆ ನಗರಗಳಿಗೆ ಹೋಗುತ್ತಿದ್ದಾರೆ. ಇಲ್ಲಿನ ಸಂಪತ್ತು, ಪರಿಶುದ್ಧ ಆಡಳಿತ ಕಾರಣ ಎಂದು ಹೇಳಿದ್ದರು ಎಂದರು.

ಆದರೆ ಇಂದು ಈ ರಾಜ್ಯಕ್ಕೆ ಏನಾಗಿದೆ? ನಮ್ಮ ರಾಜ್ಯ ಕಳಂಕಿತ ರಾಜ್ಯವಾಗಿದೆ. ಈ ಕಳಂಕ ತಂದುಕೊಟ್ಟವರು ಯಾರು? ದೇವರಾಜ ಅರಸು, ವೀರೇಂದ್ರ ಪಾಟೀಲ್, ಬಂಗಾರಪ್ಪ, ಎಸ್.ಎಂ ಕೃಷ್ಣ, ಧರಂ ಸಿಂಗ್ ಹಾಗೂ ಸಿದ್ದರಾಮಯ್ಯ ಅವರ ಕಾಲದಲ್ಲಿ ನಮ್ಮ ಪಕ್ಷ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿಕೊಂಡು ಬಂದಿತ್ತು. ಇದು ಕಾಂಗ್ರೆಸ್ ಇತಿಹಾಸ, ಶಕ್ತಿ. ಯಾವಾಗೆಲ್ಲ ಕಾಂಗ್ರೆಸ್ ಅಧಿಕಾರ ಮಾಡಿದೆಯೋ ಎಲ್ಲ ವರ್ಗದ ಜನರಿಗೆ ಸಹಾಯ ಮಾಡಿಕೊಂಡು ಬಂದಿದೆ. ವೀರಪ್ಪ ಮೋಯ್ಲಿ ಅವರ ಕಾಲದಲ್ಲಿ ಸಿಇಟಿ ಆರಂಭಿಸಿದೆವು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಬೆಳಎಯಲು ಬುನಾದಿ ಹಾಕಲಾಯಿತು. ಇದರ ಮೇಲೆ ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಅನೇಕ ಕಾರ್ಯಕ್ರಮ ನೀಡಿ ಕರ್ನಾಟಕ ಹಾಗೂ ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲಾಯಿತು ಎಂದು ಮಾಹಿತಿ ನೀಡಿದರು.

ಮೆಟ್ರೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸ್ತ್ರೀಶಕ್ತಿ ಸಂಘ, ಬಿಸಿಯೂಟ ಸೇರಿದಂತೆ ಹಲವು ಕಾರ್ಯಕ್ರಮ ನೀಡಿದ್ದೆವು. ದೇವರಾಜ ಅರಸು ಅವರ ಕಾಲದಲ್ಲಿ ಉಳುವವನಿಗೆ ಭೂಮಿ ನೀಡುತ್ತಾ ಬಂದಿದ್ದೇವೆ. ಬಡವರು, ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲು ಕಾರ್ಯಕ್ರಮ ರೂಪಿಸಲಾಯಿತು. ಬಂಗಾರಪ್ಪನವರ ಕಾಲದಲ್ಲಿ ಆಶ್ರಯ, ಆರೋಗ್ಯ, ಆರಾಧನಾ, ವಿಶ್ವ ಯೋಜನೆ ತಂದು ಹಳ್ಳಿಗಳ ಗುಡಿಗಳಿಗೆ ಗೌರವ ನೀಡಲು ಕಾರ್ಯಕ್ರಮ ನೀಡಲಾಯಿತು. ಸಿದ್ದರಾಮಯ್ಯ ಅವರ ಕಾಲದಲ್ಲಿ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ನೀಡಿತ್ತು. ಅದರಲ್ಲಿ 159 ಭರವಸೆಗಳನ್ನು ಈಡೇರಿಸಲಾಗಿದೆ. ಆ ಮೂಲಕ ನುಡಿದಂತೆ ನಡೆದಿದ್ದೇವೆ. ಸಿದ್ದರಾಮಯ್ಯನವರು ಬಸವಣ್ಣನವರ ಜಯಂತಿ ದಿನದಂದು ಅಧಿಕಾರ ಸ್ವೀಕಾರ ಮಾಡಿ, ವಿಧಾನಸೌಧಕ್ಕೆ ಹೋದ ತಕ್ಷಣ ರಾಜ್ಯದ ಜನರ ಹಸಿವು ನೀಗಿಸಲು 5 ಕೆ.ಜಿ ಅಕ್ಕಿ ಉಚಿತ ನೀಡುವ ಯೋಜನೆ ಜಾರಿತಂದರು. ರಮೇಶ್ ಕುಮಾರ್ ಅವರು ನಮ್ಮ ಜಿಲ್ಲೆ ಸಿಲ್ಕ್ ಹಾಗೂ ಮಿಲ್ಕ್ ಉತ್ಪಾದನೆ ಇದ್ದು, ರೈತರಿಗೆ ಸಹಾಯ ಮಾಡಬೇಕು ಎಂದು ಕೇಳಿದರು. ಹೀಗಾಗಿ ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹ ಧನ ನೀಡಿದರು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

Share Post