HistoryNational

ಜೈಭೀಮ್:‌ ಈ ಕೂಗು ಹೇಗೆ ಶುರುವಾಯ್ತು..? ಮೊದಲು ಬಳಸಿದ್ದು ಯಾರು..?

ತಮಿಳು ಹೀರೋ ಸೂರ್ಯ ನಟಿಸಿದ ಬಹುಭಾಷಾ ಚಿತ್ರ ಜೈಭೀಮ್‌ ದೇಶಾದ್ಯಂತ ಸದ್ದು ಮಾಡುತ್ತಿದೆ. ಗಿರಿಜನ ಮಹಿಳೆಯೊಬ್ಬರು ನ್ಯಾಯಕ್ಕಾಗಿ ಮಾಡುವ ಹೋರಾಟವನ್ನು ಹಾಗೂ ಅದಕ್ಕೆ ವಕೀಲರೊಬ್ಬರು ಸಹಕರಿಸಿದ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
ಭಾರತದಲ್ಲಿ ಲಕ್ಷಾಂತರ ಮಂದಿ ಅಂಬೇಡ್ಕರ್‌ ಅಭಿಮಾನಿಗಳು, ದಲಿತಪರ ಹೋರಾಟಗಾರರು ಜೈಭೀಮ್‌ ಎಂದು ಕೂಗುವುದನ್ನು ನೋಡಿದ್ದೇವೆ. ಮಹಾರಾಷ್ಟ್ರದಾದ್ಯಂತ ಜೈಭೀಮ್‌ ಎಂಬ ಹೆಸರಿನಲ್ಲಿ ಲಕ್ಷಾಂತರ ಹಾಡುಗಳು ಚಾಲ್ತಿಯಲ್ಲಿವೆ. ತಮಿಳುನಾಡಿನಲ್ಲಿ ಪ್ರಸ್ತುತ ಈ ಒಂದು ಪದ ಅಂಬೇಡ್ಕರ್‌ ಅಭಿಮಾನಿಗಳ ನಿತ್ಯ ಪಾರಾಯಣವಾಗಿ ಬದಲಾಗಿದೆ.
ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ನಿಜವಾದ ಹೆಸರು ಭೀಮ್‌ರಾವ್‌ಜಿ ಅಂಬೇಡ್ಕರ್.‌ ಅಂಬೇಡ್ಕರ್‌ ಹೋರಾಟದ ಬಗ್ಗೆ ಬದ್ಧತೆ ಇರುವವರು ಅವರನ್ನು ಗೌರವದಿಂದ ಜೈಭೀಮ್‌ ಎಂದು ಕರೆಯುತ್ತಾರೆ. ಜೈಭೀಮ್‌ ಎಂಬುದು ಕೇವಲ ಒಂದು ಪದವಲ್ಲ. ಅದು ಅಂಬೇಡ್ಕರ್‌ ಹೋರಾಟದ ಒಂದು ಘೋಷಣೆಯಾಗಿದೆ. ಅಂಬೇಡ್ಕರ್‌ ಹೋರಾಟಗಾರರು ಈ ಪದವನ್ನು ಹೋರಾಟದ ಜೀವನಾಡಿ ಎಂದೇ ಭಾವಿಸುತ್ತಾರೆ.
ಅಭಿವ್ಯಕ್ತಿಗೆ ಬಳಸಿದ ಈ ಪದವು ಕ್ರಾಂತಿಯ ಸಂಕೇತವಾಗಿ ಹೇಗೆ ಮಾರ್ಪಟ್ಟಿತು ಎಂಬುದು ಕೂಡಾ ಕುತೂಹಲದ ಸಂಗತಿ. ‘ಜೈ ಭೀಮ್’ ಎಂಬ ಪದವು ಯಾವಾಗ ಬಳಕೆಗೆ ಬಂತು ಮತ್ತು ಈ ಪದವು ಮಹಾರಾಷ್ಟ್ರದಲ್ಲಿ ಹೇಗೆ ಹುಟ್ಟಿತು, ಭಾರತದಾದ್ಯಂತ ಹೇಗೆ ಹರಡಿತು ಎಂಬುದನ್ನುತಿಳಿಯಲು ಪ್ರಯತ್ನಿಸೋಣ ಬನ್ನಿ.

ಜೈಭೀಮ್‌ ಎಂಬ ಕೂಗು ಹೇಗೆ ಹುಟ್ಟಿತು..?

ದಲಿತ ಹೋರಾಟಗಾರ ಬಾಬು ಹರ್ದಾಸ್ ಲಕ್ಷ್ಮಣ್ ನಗರಾಲೆ ಅವರು ೧೯೩೫ ರಲ್ಲಿ ‘ಜೈ ಭೀಮ್’ ಎಂಬ ಕೂಗು ಶುರು ಮಾಡಿದರು. ಬಾಬು ಹರ್ದಾಸ್ ಅವರು ಕೇಂದ್ರ ಪ್ರಾಂತ್ಯಗಳ ಬೇರರ್ ಮಂಡಳಿಯ ಶಾಸಕರಾಗಿದ್ದರು. ಇದಲ್ಲದೆ, ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರಗಳನ್ನು ಅನುಸರಿಸುವ ಕಾರ್ಯಕರ್ತರೂ ಆಗಿದ್ದರು. ನಾಸಿಕ್‌ನಲ್ಲಿನ ಕಲಾರಾಮ್‌ ದೇವಾಲಯದಲ್ಲಿ ನಡೆದ ಹೋರಾಟ, ಚಾವ್ದಾರ್‌ ಸತ್ಯಾಗ್ರಹದಲ್ಲಿ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಹೆಸರು ಮನೆಮನೆಗೂ ತಲುಪಿತು. ನಂತರ ಬಾಬು ಹರ್ದಾಸ್‌ ಲಕ್ಷ್ಮಣ್‌ ಅಂಬೇಡ್ಕರ್‌ ಅನುಚರರಲ್ಲಿ ಒಬ್ಬರಾದರು.

ಬಾಬು ಹರ್ದಾಸ್‌ ಮೊದಲ ಬಾರಿಗೆ ಜೈಭೀಮ್‌ ಎಂಬ ಕೂಗು ಎಬ್ಬಿಸಿದರೆಂದು ರಾಮಚಂದ್ರ ಕ್ಷೀರಸಾಗರ್‌ ಎಂಬುವವರು ತನ್ನ ದಲಿತ್‌ ಮೂವ್‌ಮೆಂಟ್‌ ಇನ್‌ ಇಂಡಿಯಾ ಅಂಡ್‌ ಇಟ್ಸ್‌ ಲೀಡರ್ಸ್‌ ಎಂಬ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಪ್ರತಿ ಗ್ರಾಮದಲ್ಲಿ ಸಮಾನತೆ ಕಾಣಬೇಕು ಎಂಬ ಉದ್ದೇಶದಿಂದ ಡಾ.ಬಿ.ಅಂಬೇಡ್ಕರ್‌ ಸಮತಾ ಸೈನಿಕ ದಳವನ್ನು ಸ್ಥಾಪನೆ ಮಾಡಿದರು. ಸಮತಾ ಸೈನಿಕ ದಳದಲ್ಲಿ ಹರ್ದಾಸ್‌ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ʻಕಾಮ್ಟಿ, ನಾಗಪುರ ಪ್ರಾಂತ್ಯಗಳಿಗೆ ಸೇರಿದ ಕಾರ್ಯಕರ್ತರನ್ನು ಸೇರಿಸಿ ಹರ್ದಾಸ್‌ ಒಂದು ದೊಡ್ಡ ದಳವನ್ನು ರೂಪಿಸಿದರು. ಆ ದಳದಲ್ಲಿನ ಸ್ವಯಂಸೇವಕರು ನಮಸ್ಕಾರ್‌, ರಾಮ್‌ ರಾಮ್‌ ಅಲ್ಲದೆ ಜೋಹಾರ್‌, ಮಾಯಾಬಾಪ್‌ ಎಂಬ ಕೂಗಿಗೆ ಬದಲಾಗಿ ಜೈಭೀಮ್‌ ಎಂದು ಕರೆಯಬೇಕೆಂದು ಹರ್ದಾಸ್‌ ಸೂಚಿಸಿದರುʼ ಎಂದು ದಲಿತ್‌ ಪ್ಯಾಂಥರ್ಸ್‌ ಸಹ ವ್ಯವಸ್ಥಾಪಕ ಜೆವಿಎಸ್‌ ಪವಾರ್‌ ಹೇಳಿದರು.

   ಮುಸ್ಲಿಮರು ʻಸಲಾಂ ವಾಲೇಕುಂʼ ಎಂದು ವಿಶ್‌ ಮಾಡಿದಾಗ, ʻವಾಲೇಕುಂ ಸಲಾಂʼ ಎನ್ನುವಂತೆ ʻಜೈಭೀಮ್‌ʼ ಎಂದು ಕರೆದರೆ ʻಬಲ್‌ಭೀಮ್‌ʼ ಎಂದು ಕರೆಯಬೇಕೆಂದು ಅವರು ಸೂಚಿಸಿದರೆಂದು ಪವಾರ್‌ ಹೇಳಿದ್ದಾರೆ. ಅಂಬೇಡ್ಕರ್‌ ಬದುಕಿದ್ದ ಕಾಲದಲ್ಲೇ ʻಜೈಭೀಮ್‌ʼ ಕೂಗು ಶುರುವಾಗಿತ್ತೆಂದೂ, ಕೆಲವರು ಕಾರ್ಯಕರ್ತರು ಅಂಬೇಡ್ಕರ್‌ ಅವರನ್ನು ʻಜೈಭೀಮ್‌ʼ ಎಂದು ಸಂಬೋಧಿಸುತ್ತಿದ್ದರೆಂದು ಮಹಾರಾಷ್ಟ್ರದ ಮಾಜಿ ನ್ಯಾಯಮೂರ್ತಿ ಸುರೇಶ್‌ ಘೋರ್ಪಡೆ ಹೇಳಿದ್ದಾರೆ.
ಸುರೇಶ್‌ ಘೋರ್ಪಡೆ ಸೆಷನ್ಸ್‌ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು. ವಿದರ್ಭ ಮೂಲದ ದಲಿತ ಹೋರಾಟಗಾರರೂ ಹೌದು. ಅವರು ಬಾಬು ಹರ್ದಾಸ್‌ ಬಗ್ಗೆ ಲೇಖನಗಳನ್ನು ಬರೆದಿದ್ದಾರೆ, ಉಪನ್ಯಾಸಗಳನ್ನು ನೀಡಿದಾರೆ.

ʻಜೈ ಭೀಮ್‌ʼ ಎಂದು ಯಾಕೆ ಹೇಳುತ್ತಾರೆ..?
ಬಾಬಾ ಸಾಹೇಬ್‌ ಅಂಬೇಡ್ಕರ್‌ ಹೆಸರು ಭೀಮ್‌ರಾವ್‌ ರಾಮ್‌ಜಿ ಅಂಬೇಡ್ಕರ್‌. ಅವರ ಹೆಸರನ್ನು ಸಂಕ್ಷಿಪ್ತ ರೂಪದಲ್ಲಿ ಕರೆಯುವ ವಿಧಾನ ಮೊದಲು ಮಹಾರಾಷ್ಟ್ರದಲ್ಲಿತ್ತು. ನಂತರ ದೇಶಾದ್ಯಂತ ಅದು ವಿಸ್ತರಿಸಿತು. ಸೂರ್ಯ ಸಿನಿಮಾ ನೋಡಿದರೆ ಅಂದರಲ್ಲಿ ಜೈಭೀಮ್‌ ಎಂಬ ಪದವನ್ನು ನೇರವಾಗಿ ಉಪಯೋಗಿಸದೇ ಇದ್ದದ್ದು ಗಮನಿಸಬಹುದು. ಜೈಭೀಮ್‌ ಎಂದು ಕರೆಯುವುದು ಕೇವಲ ನಮಸ್ಕಾರ, ನಮಸ್ತೆ ಎಂಬಂತೆ ಸರಳವಾದುದಲ್ಲ. ಅದೊಂದು ಹೋರಾಟದ ಕೂಗು.

Share Post