DistrictsPolitics

ಇಂದು ಹುಬ್ಬಳ್ಳಿಗೆ ಮೋದಿ ಆಗಮನ; ಎಲ್ಲೆಲ್ಲೂ ಕೇಸರಿಮಯ

ಹುಬ್ಬಳ್ಳಿ; ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಹುಬ್ಬಳ್ಳಿ ಸಜ್ಜಾಗಿದೆ. ಎಲ್ಲೆಲ್ಲೂ ಕೇಸರಿ ರಾರಾಜಿಸುತ್ತಿದೆ. ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿಯವರು 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮೋದಿ ಭಾಷಣ ಮಾಡಲಿದ್ದು, ಮೋದಿ ಭಾಷಣ ಕೇಳಲು ಉತ್ತರ ಕರ್ನಾಟಕದ ಜನ ಕಾತರರಾಗಿದ್ದಾರೆ.

ಮಧ್ಯಾಹ್ನ 3.30ಕ್ಕೆ ಹುಬ್ಬಳ್ಳಿ ವಿಮಾನ‌ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ರೋಡ್‌ ಶೋ ಮೂಲಕ ರೈಲ್ವೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮ ಸ್ಥಳಕ್ಕೆ ಮೋದಿ ಆಗಮಿಸಲಿದ್ದಾರೆ. ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರದಲ್ಲಿ ಮೋದಿ ಹಾಗೂ ಸ್ವಾಮಿ ವಿವೇಕಾನಂದರ ಫೋಟೋಗಳು ರಾರಾಜಿಸುತ್ತಿವೆ. ಸಂಜೆ ನಾಲ್ಕು ಗಂಟೆಗೆ ಯುವಜನೋತ್ಸವಕ್ಕೆ ಮೋದಿ ಚಾಲನೆ ನೀಡಲಿದ್ದು, ಸಂಜೆ 5.15ಕ್ಕೆ ಮುಗಿಯಲಿದೆ.

ಕಾರ್ಯಕ್ರಮದಲ್ಲಿ ಮೋದಿ ಜೊತೆ 21 ಗಣ್ಯರು ವೇದಿಕೆ ಹಂಚಿಕೊಳ್ಳಲಿದ್ದಾರೆ. ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​​, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೋದಿ ಅಕ್ಕಪಕ್ಕ ಕೂರಲಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಅನುರಾಗ್ ಸಿಂಗ್​ ಠಾಕೂರ್, ನಿಶ್ಚಿತ್ ಪ್ರಮಾಣಿಕ್ ಕೂಡಾ ವೇದಿಕೆಯಲ್ಲಿರಲಿದ್ದಾರೆ. ಇನ್ನು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ನಾರಾಯಣಗೌಡ, ಹಾಲಪ್ಪ ಆಚಾರ್, ಮುನೇನಕೊಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡಾ ವೇದಿಕೆಯಲ್ಲಿ ಕೂರಲಿದ್ದಾರೆ.

ಸ್ಥಳೀಯ ಶಾಸಕರಾದ ಅರವಿಂದ ಬೆಲ್ಲದ್, ಸಿ.ಎಂ.‌ನಿಂಬಣ್ಣವರ್, ಅಬ್ಬಯ್ಯ ಪ್ರಸಾದ್​​, ಅಮೃತ್ ದೇಸಾಯಿ, ಕುಸುಮಾ ಶಿವಳ್ಳಿ, ಎಂಎಲ್​ಸಿ ಎಸ್.ವಿ.ಸಂಕನೂರ್, ಪ್ರದೀಪ್ ಶೆಟ್ಟರ್, ಹುಬ್ಬಳ್ಳಿ-ಧಾರವಾಡ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ ಅವರಿಗೆ ಕೂಡಾ ವೇದಿಕೆಯಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಭದ್ರತೆಗೆ 2900 ಪೊಲೀಸರ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 7 ಎಸ್ಪಿ, 25 ಡಿವೈಎಸ್ಪಿ, 60 ಪಿಐ, 18 ಕೆಎಸ್ ಆರ್ ಪಿ ತುಕಡಿ, ಗರುಡಾ, ಸಿಆರ್, ಡಿಆರ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

Share Post