BengaluruPolitics

ಜೋರಾಯ್ತು ಒಕ್ಕಲಿಗರ ಮೀಸಲಾತಿ ಹೋರಾಟ; ಶೇ.4 ರಿಂದ 12ಕ್ಕೆ ಹೆಚ್ಚಿಸಲು ಒತ್ತಡ

ನವದೆಹಲಿ; ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಕರ್ನಾಟಕದಲ್ಲಿ ಮೀಸಲಾತಿ ಹೋರಾಟಗಳು ಹೆಚ್ಚಾಗುತ್ತಿವೆ. ಅದರಲ್ಲೂ ಸರ್ಕಾರ ಎಸ್‌ಟಿ ಸಮುದಾಯದ ಮೀಸಲಾತಿ ಹೆಚ್ಚಿಸಿದ ನಂತರ ಪಂಚಮಸಾಲಿ ಸೇರಿದಂತೆ ಹಲವು ಸಮುದಾಯದವರು ಮೀಸಲಾತಿಗಾಗಿ ಹೋರಾಟ ತೀವ್ರಗೊಳಿಸಿದ್ದಾರೆ. ಈ ನಡುವೆ ಪ್ರಬಲ ಒಕ್ಕಲಿಗ ಸಮುದಾಯ ಕೂಡಾ ಮೀಸಲಾತಿಯನ್ನು ಶೇ.4 ರಿಂದ 12 ಕ್ಕೆ ಏರಿಸುವಂತೆ ಒತ್ತಾಯ ಮಾಡುತ್ತಿದೆ. ಈ ಕುರಿತಂತೆ ಸರ್ಕಾರದ ಮೇಲೆ ಒತ್ತಡ ತರಲು ಇತ್ತೀಚೆಗೆ ಒಕ್ಕಲಿಗರ ಸಮುದಾಯದ ನಾಯಕ ಸಭೆ ಕೂಡಾ ನಡೆಸಲಾಗಿದೆ.

ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಲ್ಲಿ ಒಬ್ಬರಾದ ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಕೂಡಾ ಆಗಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಮ್ಮ ಸಮುದಾಯಕ್ಕೆ ಮತ್ತೆ ಸಿಎಂ ಸ್ಥಾನ ಸಿಗುತ್ತದೆ ಎಂದು ಹೇಳುವ ಮೂಲಕ ಒಕ್ಕಲಿಗರ ಬೆಂಬಲ ಪಡೆಯಲು ಪ್ರಯತ್ನ ಮಾಡ್ತಿದ್ದಾರೆ. ಇನ್ನೊಂದೆಡೆ ಜೆಡಿಎಸ್‌ ಪಕ್ಷದ ನಾಯಕ ಕುಮಾರಸ್ವಾಮಿ ಕೂಡಾ ಒಕ್ಕಲಿಗರ ಮತಗಳನ್ನು ತಮ್ಮ ಪರವಾಗಿಯೇ ಇರುವಂತೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇತ್ತ ಬಿಜೆಪಿಯಲ್ಲೂ ಒಂದಿಬ್ಬರು ನಾಯಕರು ಪ್ರಬಲ ಒಕ್ಕಲಿಗ ನಾಯಕರೆನಿಸಿಕೊಂಡು ಆ ಮೂಲಕ ಅಧಿಕಾರದ ಆಸೆ ಪಡುತ್ತಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತದಾರರು ಹೆಚ್ಚಿದ್ದಾರೆ. ಈ ಭಾಗದ ಒಕ್ಕಲಿಗರು ಇಲ್ಲಿಯವರೆಗೂ ಹೆಚ್ಚಾಗಿ ಜೆಡಿಎಸ್‌ಗೆ ಬೆಂಬಲವಾಗಿ ನಿಲ್ಲುತ್ತಾ ಬಂದಿದ್ದಾರೆ. ಆದರೆ 2023ರ ಚುನಾವಣೆಯಲ್ಲಿ ಒಕ್ಕಲಿಗರನ್ನು ಕಾಂಗ್ರೆಸ್‌ನತ್ತ ಸೆಳೆಯಲು ಡಿ.ಕೆ.ಶಿವಕುಮಾರ್‌ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಈ ಭಾಗದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಪರಿಷತ್‌ ಚುನಾವಣೆಗಳಲ್ಲಿ ಕೊಂಚ ಕಾಂಗ್ರೆಸ್‌ ಪರವಾದ ರಿಸಲ್ಟ್‌ ಬಂದಿರುವುದು ಡಿ.ಕೆ.ಶಿವಕುಮಾರ್‌ ಉತ್ಸಾಹಕ್ಕೆ ನೀರೆರೆದಿದೆ. ಹಳೇ ಮೈಸೂರು ಭಾಗದ ಒಕ್ಕಲಿಗರು ಬದಲಾವಣೆ ಬಯಸುತ್ತಿದ್ದಾರೆ ಎಂಬ ಸಂದೇಶವೂ ರವಾನೆಯಾಗಿದೆ. ಹೀಗಾಗಿಯೇ ಇದರ ಲಾಭ ಪಡೆಯಲು ಡಿ.ಕೆ.ಶಿವಕುಮಾರ್‌ ಒಕ್ಕಲಿಗರ ಪರವಾಗಿ ನಿಂತು ಕೆಲಸ ಮಾಡುತ್ತಿದ್ದಾರೆ.

ಬೆಂಗಳೂರಿನಿಂದ 100 ಕಿ.ಮೀ ದೂರದ ನಾಗಮಗಲದಲ್ಲಿರುವ ಆದಿ ಚುಂಚನಗಿರಿ ಮಠಕ್ಕೆ ಡಿ.ಕೆ.ಶಿವಕುಮಾರ್‌ ಭೇಟಿ ನೀಡಿದ್ದರು. ಅಲ್ಲಿನ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಒಕ್ಕಲಿಗರ ಮೀಸಲಾತಿ ವಿಚಾರವಾಗಿ ಶ್ರೀಗಳೊಂದಿಗೆ ಗುಪ್ತ ಮಾತುಕತೆ ನಡೆಸಿದ್ದಾರೆ.  ಒಂದು ಗಂಟೆಗೂ ಹೆಚ್ಚು ಕಾಲ ಡಿ.ಕೆ.ಶಿವಕುಮಾರ್‌ ಅವರು ನಿರ್ಮಲಾನಂದನಾಥ ಶ್ರೀಗಳೊಂದಿಗೆ ಚರ್ಚೆ ನಡೆಸಿದ್ದು, ಇದು ರಾಜಕೀಯವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಹಳೇ ಮೈಸೂರು ಭಾಗದ ಕಾವೇರಿ ಜಲಾನಯನ ಪ್ರದೇಶ, ಮಂಡ್ಯ, ತುಮಕೂರು, ಹಾಸನ, ಚಾಮರಾಜನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಡಿ.ಕೆ.ಶಿವಕುಮಾರ್‌  ನಿರಂತರ ಸಂಚಾರ ಮಾಡಿ, ಒಕ್ಕಲಿಗರನ್ನು ಒಗ್ಗೂಡಿಸುವ, ಕಾಂಗ್ರೆಸ್‌ ಪರವಾಗಿ ನಿಲ್ಲುವಂತೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಅಂದಹಾಗೆ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಒಕ್ಕಲಿಗರ ಸಂಖ್ಯೆ ಶೇ.39ಕ್ಕೂ ಹೆಚ್ಚಿದೆ. ರಾಜ್ಯದ ಎಂಬತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕವಾಗಿದೆ. ಹೀಗಾಗಿ ಈ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದರೆ ಸಿಎಂ ಸ್ಥಾನ ಅಲಂಕರಿಸುವುದು ಸುಲಭವಾಗುತ್ತದೆ ಎಂಬ ಲೆಕ್ಕಾಚಾರ ಡಿ.ಕೆ.ಶಿವಕುಮಾರ್‌ ಅವರದ್ದು.

ಮಾಹಿತಿ ಪ್ರಕಾರ ರಾಜ್ಯದ ಎಲ್ಲಾ 224 ಕ್ಷೇತ್ರಗಳ ಮತದಾರರನ್ನು ಜಾತಿವಾರು, ವಯಸ್ಸಿನವಾರು ಹಾಗೂ ಲಿಂಗವಾರು ವಿಂಗಡಿಸಿ ಕಾಂಗ್ರೆಸ್‌ ಒಂದು ಮ್ಯಾಪ್‌ ಸಿದ್ಧಮಾಡಿಕೊಂಡಿದೆ. ಅದರ ಆಧಾರದ ಮೇಲೆ ಕಾಂಗ್ರೆಸ್‌ ಸಂಘಟನೆಗೆ ಮುಂದಾಗಿದೆ. ಇನ್ನೊಂದೆಡೆ ಪ್ರಬಲ ಜಾತಿಗಳಲ್ಲಿ ಒಂದಾದ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸುವ ಮೂಲಕ ಆ ಸಮುದಾಯದ ಮತಗಳನ್ನು ಸೆಳೆಯಲು ಕೂಡಾ ಡಿ.ಕೆ.ಶಿವಕುಮಾರ್‌ ಪ್ಲ್ಯಾನ್‌ ಮಾಡಿದ್ದಾರೆ.

ಕರ್ನಾಟಕದಲ್ಲಿ ಒಕ್ಕಲಿಗ ಸಮುದಾಯ ಒಬಿಸಿ ಅಡಿಯಲ್ಲಿ ಬರುತ್ತದೆ. 3ಎ ಮೀಸಲಾತಿಯಡಿಯಲ್ಲಿ ಒಕ್ಕಲಿಗ ಸಮುದಾಯವಿದೆ. ಪ್ರಸ್ತುತ 3ಎಗೆ ಶೇಕಡಾ 4 ರಷ್ಟು ಮೀಸಲಾತಿ ಸಿಗುತ್ತಿದೆ. ಆದ್ರೆ ಅದನ್ನು ಶೇ.12ಕ್ಕೆ ಹೆಚ್ಚಿಸುವಂತೆ ಒಕ್ಕಲಿಗ ಸಮುದಾಯ ಮೊದಲಿನಿಂದಲೂ ಬೇಡಿಕೆ ಇಡುತ್ತಾ ಬಂದಿದೆ. ಆದ್ರೆ ಇದೀಗ ಈ ಕೂಗು ಜೋರಾಗಿದೆ. ಚುನಾವಣೆ ಸಮಯದಲ್ಲಿ ಈ ಕೂಗಿಗೆ ಡಿ.ಕೆ.ಶಿವಕುಮಾರ್‌ ಕೂಡಾ ಬಲ ತುಂಬಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಗಟ್ಟಿ ನೆಲೆ ಹಾಗೂ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಡಿ.ಕೆ.ಶಿವಕುಮಾರ್‌ ಒಕ್ಕಲಿಗರ ಮನಸ್ಸು ಗೆಲ್ಲಲು ಮುಂದಾಗಿದ್ದಾರೆ. ಇದರ ಭಾಗವಾಗಿಯೇ ಅವರು ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿ, ಒಕ್ಕಲಿಗರ ಮೀಸಲಾತಿ ಕುರಿತಂತೆ ಚರ್ಚೆ ಮಾಡಿದ್ದಾರೆ. ಅನಂತರ ಈ ಬಗ್ಗೆ ಟ್ವೀಟ್‌ ಕೂಡಾ ಮಾಡಿದ್ದಾರೆ.

ಒಕ್ಕಲಿಗರ ಜನಸಂಖ್ಯೆಗೆ ಹೋಲಿಸಿದರೆ ಸದ್ಯ ಇರುವ ಮೀಸಲಾತಿ ತೀರಾ ಕಡಿಮೆ ಇದೆ. ಇದರಿಂದ ಒಕ್ಕಲಿಗ ಸಮುದಾಯದಕ್ಕೆ ಹೆಚ್ಚು ಅನ್ಯಾಯವಾಗಿದೆ. ಮೀಸಲಾತಿ ಹೆಚ್ಚಿಸುವ ಮೂಲಕ ಒಕ್ಕಲಿಗ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಡಿ.ಕೆ.ಶಿವಕುಮಾರ್‌ ಒತ್ತಾಯ ಮಾಡಿದ್ದಾರೆ. ಈ ನಡುವೆ ಒಕ್ಕಲಿಗರು ಜನವರಿ ಒಳಗೆ ಮೀಸಲಾತಿ ಹೆಚ್ಚಳ ಮಾಡಬೇಕೆಂದೂ ಗಡುವು ನೀಡಿದ್ದಾರೆ. ಆದ್ರೆ ಸಿಎಂ ಮಾತ್ರ ಈ ಬಗ್ಗೆ ಪರಿಶೀಲಿಸುತ್ತೇವೆ. ಎಲ್ಲವನ್ನೂ ಕಾನೂನೂ ಚೌಕಟ್ಟಿನಲ್ಲಿ ಮಾಡಬೇಕು, ಗುಡುವು ನೀಡುವುದು ಸುಲಭ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ.

ಅಂದಹಾಗೆ ಡಿ.ಕೆ.ಶಿವಕುಮಾರ್‌ ಅವರು ಸದ್ಯ ಒಕ್ಕಲಿಗರ ಮೀಸಲಾತಿ ವಿಚಾರ ಮುನ್ನೆಲೆಗೆ ತಂದಿದ್ದಾರೆ. ಇದರ ಜೊತೆಗೆ ಕೆಲ ತಿಂಗಳುಗಳಿಂದ ಒಕ್ಕಲಿಗರ ಎಲ್ಲಾ ಸಭೆಗಳಲ್ಲೂ ಭಾಗವಹಿಸುತ್ತಿದ್ದಾರೆ. ಅಲ್ಲಿ, ಒಕ್ಕಲಿಗರ ಸಮುದಾಯಕ್ಕೆ ಮತ್ತೆ ಸಿಎಂ ಸ್ಥಾನ ಅಲಂಕರಿಸುವ ಅವಕಾಶ ಬರುತ್ತಿದೆ. ನೀವೆಲ್ಲಾ ನನ್ನ ಬೆನ್ನಿಗೆ ನಿಂತರೆ ನಾನು ಸಿಎಂ ಆಗಬಹುದು ಎಂದು ಹೇಳುತ್ತಾ ಬಂದಿದ್ದಾರೆ. ಒಕ್ಕಲಿಗರಿಗೆ ಈ ಬಾರಿ ಅಧಿಕಾರ ಹಿಡಿಯುವ ಅವಕಾಶವಿದೆ. ಈ ಅವಕಾಶವನ್ನು ಕಳೆದುಕೊಳ್ಳವಾರದು ಎಂದು ಡಿ.ಕೆ.ಶಿವಕುಮಾರ್‌ ಅವರು ಒಕ್ಕಲಿಗ ಮುಖಂಡರಿಗೆ ಮನವಿ ಮಾಡುತ್ತಿದ್ದಾರೆ.

Share Post