ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ತೇಜೋವಧೆ ಆರೋಪ; ಸಮನ್ಸ್ ನೀಡಿದ ಕೋರ್ಟ್
ಚಿಕ್ಕಬಳ್ಳಾಪುರ; ಮಾನನಷ್ಟ ಪ್ರಕರಣವೊಂದರಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದೆ. ಜೊತೆಗೆ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಸಮನ್ಸ್ ಕೂಡಾ ಜಾರಿ ಮಾಡಿದೆ.
ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಅವರು ಸಚಿವರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಕೇಸ್ ದಾಖಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್, ಸಚಿವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕೋರ್ಟ್ ಸೂಚಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಸುಧಾಕರ್ ರನ್ನು ನೇಮಿಸಲಾಗಿತ್ತು. ಈ ಹುದ್ದೆಗೆ ಇರಬೇಕಾದ ಅರ್ಹತೆ ಮತ್ತು ಆಯ್ಕೆಯ ಮಾನದಂಡ ಪ್ರಶ್ನಿಸಿ ಆಂಜನೇಯ ರೆಡ್ಡಿ ಕೋರ್ಟ್ ಮೊರೆ ಹೋಗಿದ್ದರು.
ಈ ವೇಳೆ ಮಾತನಾಡಿದ್ದ ಸುಧಾಕರ್ ಅವರು, ರೈತರಿಗೆ ಕಳ್ಳಭಟ್ಟಿ ಕುಡಿಸಿ ಜೈಲು ಸೇರಿದ್ದ ವ್ಯಕ್ತಿ ನನ್ನ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಆಂಜನೇಯರೆಡ್ಡಿ ವಿರುದ್ಧ ಕಿಡಿಕಾರಿದ್ದರು. ಇದರಿಂದ ನನ್ನ ತೇಜೋವಧೆಯಾಗಿದೆ ಎಂದು ಆಂಜನೇಯರೆಡ್ಡಿ ಕೋರ್ಟ್ ಮೊರೆ ಹೋಗಿದ್ದರು. ಮಾನನಷ್ಟ ಕೇಸ್‌ನ್ನು ಕ್ರಿಮಿನಲ್ ಪ್ರಕರಣ ಎಂದು ಪರಿಗಣಿಸಬಹುದು ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಇದರ ಆಧಾರದ ಮೇಲೆ ಆಂಜನೇಯ ರೆಡ್ಡಿ, ಸುಧಾಕರ್ ವಿರುದ್ಧ ಕೇಸ್ ಹಾಕಿದ್ದರು.