ಮಂಗಳೂರು ಬ್ಲಾಸ್ಟ್ ಹೊಣೆ ಹೊತ್ತ ʼಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ʼ; ಕದ್ರಿ ದೇಗುಲ ಟಾರ್ಗೆಟ್ ಆಗಿತ್ತಾ..?
ಬೆಂಗಳೂರು; ಮಂಗಳೂರು ಕುಕ್ಕರ್ ಬ್ಲಾಸ್ಟ್ ಹೊಣೆಯನ್ನು ʼಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ʼ ಎಂಬ ಸಂಘಟನೆ ಹೊತ್ತುಕೊಂಡಿದೆ. ಈ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ಹರಿದಾಡುತ್ತಿದೆ. ಅರೇಬಿಕ್ ಭಾಷೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ʼಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ʼ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಕದಿರಿ ದೇಗುಲ ನಮ್ಮ ಟಾರ್ಗೆಟ್ ಆಗಿತ್ತು ಎಂದು ಹೇಳಿಕೊಂಡಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದ್ರೆ ಇದನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ.
ಕದಿರಿ ದೇಗುಲದಲ್ಲಿ ಬಾಂಬ್ ಸ್ಫೋಟಿಸಲು ಯೋಜಿಸಲಾಗಿತ್ತು. ಆದ್ರೆ ಮಾರ್ಗಮಧ್ಯೆಯೇ ಸ್ಫೋಟ ಸಂಭವಿಸಿದೆ ಎಂದು ʼಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ʼ ಹೇಳಿಕೊಂಡಿದೆ. ನವೆಂಬರ್ 23ರಂದು ಅರೆಬಿಕ್ ಭಾಷೆಯಲ್ಲಿ “Majlis Almuqawamat Al’islamia” ಪೋಸ್ಟ್ ಜೊತೆ ಬಾಂಬ್ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಖ್‌ನ ಫೋಟೋಗಳನ್ನು ಕೂಡಾ ಹಾಕಲಾಗಿದೆ. ಇದ್ರಲ್ಲಿ ಎಡಿಜಿಪಿ ಅಲೋಕ್ ಕುಮಾರ್‌ಗೆ ಬೆದರಿಕೆ ಹಾಕಲಾಗಿದ್ದು, ನಿಮ್ಮ ಸಂತೋಷ ಅಲ್ಪಕಾಲಿಕ, ನಿಮ್ಮ ದಬ್ಬಾಳಿಕೆಯ ಫಲವನ್ನು ಅನುಭವಿಸ್ತೀರಿ ಎಂದು ಹೇಳಿದೆ. ಆದ್ರೆ ಈ ಸಂಘಟನೆ ಇದೆಯೋ ಇಲ್ಲವೋ, ಈ ಪೋಸ್ಟ್ ಹಾಕಿದವರು ಯಾರು ಎಂಬುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕಿದೆ.
ಕದ್ರಿ ಮಂಜುನಾಥ ದೇವಸ್ಥಾನ ಇತಿಹಾಸ ಪ್ರಸಿದ್ಧ ದೇವಸ್ಥಾನವಾಗಿದ್ದು, ಹತ್ತನೇ ಶತಮಾನದಲ್ಲಿ ನಿರ್ಮಿಸಿದ್ದಾಗಿದೆ. ಸ್ಫೋಟ ನಡೆದ ಸ್ಥಳದಿಂದ 4.5 ಕಿಲೋಮೀಟರ್ ದೂರದಲ್ಲಿ ಈ ದೇವಸ್ಥಾನ ಇದೆ ಎಂದು ತಿಳಿದುಬಂದಿದೆ.