ಭಯೋತ್ಪಾದನೆ ನಿಗ್ರಹಿಸುವ ತನಕ ವಿರಮಿಸೋದಿಲ್ಲ; ಪ್ರಧಾನಿ ಮೋದಿ
ನವದೆಹಲಿ; ಭಯೋತ್ಪಾದನೆ ಹಲವು ಹೆಸರುಗಳ ಮೂಲಕ ಇಡೀ ಜಗತ್ತನ್ನು ವ್ಯಾಪಿಸಿದೆ. ಅದನ್ನು ಹತ್ತಿಕ್ಕುವಲ್ಲಿ ನಾವು ಸಮರ್ಥ ಹೋರಾಟ ನಡೆಸುತ್ತಿದ್ದೇವೆ. ಭಯೋತ್ಪಾದನೆಯನ್ನು ದೇಶದಲ್ಲಿ ಬೇರು ಸಮೇತ ಕಿತ್ತುಹಾಕುವವರೆಗೂ ನಾನು ವಿರಮಿಸೋದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ಖಾಸಗಿ ಹೊಟೇಲ್ನಲ್ಲಿ ಶುರುವಾದ ‘ಭಯೋತ್ಪಾದನೆಗೆ ಹಣಕಾಸು ಬೇಡ’ ಎಂಬ ಮೂರನೇ ಜಾಗತಿಕ ಸಮ್ಮೇಳನ ಉದ್ಘಾಟಿಸಿ ಮೋದಿಯವರು ಮಾತನಾಡಿದರು.
ಉಗ್ರ ಚಟುವಟಿಕೆಗಳಿಂದಾಗಿ ನಾವು ಸಾವಿರಾರು ಜೀವಗಳನ್ನು ಕಳೆದುಕೊಂಡಿದ್ದೇವೆ. ಹಲವು ದಶಕಗಳಿಂದ ಈ ಭಯೋತ್ಪಾದನಾ ಕೃತ್ಯಗಳು ಮುಂದುವರೆದಿವೆ. ಜಗತ್ತಿನಾದ್ಯಂತ ಭಯೋತ್ಪಾದನೆ ಆವರಿಸಿದೆ. ಭಾರತದಲ್ಲಿ ಭಯೋತ್ಪಾದನೆ ಮಟ್ಟ ಹಾಕುವಲ್ಲಿ ನಾವು ಸಾಕಷ್ಟು ಕ್ರಮ ಕೈಗೊಂಡಿದ್ದೇವೆ. ಭಯೋತ್ಪಾದಕನನ್ನು ಶಸ್ತ್ರಾಸ್ತ್ರಗಳನ್ನು ಬಳಸಿ ಹೊಡೆದುರುಳಿಸಬಹುದು. ಆದ್ರೆ ಅದು ತಾತ್ಕಾಲಿಕ ಪರಿಹಾರ ಅಷ್ಟೇ. ಇಂತಹ ಕ್ರಮಗಳಿಂದ ಉಗ್ರ ಚಟುವಟಿಕೆ ಸಂಪೂರ್ಣ ನಾಶ ಮಾಡಲು ಸಾಧ್ಯವೇ ಇಲ್ಲ. ಅದರ ಬದಲಾಗಿ ಭಯೋತ್ಪಾದನೆಗೆ ಹರಿದುಬರುವ ಹಣಕಾಸು ನೆರವಿಗೆ ನಾವು ತಡೆಯೊಡ್ಡಬೇಕು. ಭಯೋತ್ಪಾದಕರಿಗೆ ಎಲ್ಲಿಂದ ಹಣ ಬರುತ್ತಿದೆ ಎಂದು ಪತ್ತೆ ಹಚ್ಚಿ ಅದು ಬರದಂತೆ ತಡೆಯಬೇಕು. ಆಗ ಮಾತ್ರ ಭಯೋತ್ಪಾದನೆ ನಿಲ್ಲುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.