ನಿರುದ್ಯೋಗಿಗಳಿಗೆ ಮೋದಿ ದೀಪಾವಳಿ ಗಿಫ್ಟ್; 75 ಸಾವಿರ ಮಂದಿಗೆ ಉದ್ಯೋಗ
ನವದೆಹಲಿ; ಪ್ರಧಾನಿ ನರೇಂದ್ರ ಮೋದಿಯವರು ದೀಪಾವಳಿ ಹಬ್ಬಕ್ಕೆ ನಿರುದ್ಯೋಗಿ ಯುವಕರಿಗೆ ಗಿಫ್ಟ್ ಕೊಟ್ಟಿದ್ದಾರೆ. 75 ಸಾವಿರ ಯುವಕರಿಗೆ ಉದ್ಯೋಗ ನೀಡುವ ಮೂಲಕ ನಿರುದ್ಯೋಗಿಗಳ ಮುಖದಲ್ಲಿ ಆಶಾಕಿರಣ ಮೂಡಿಸಿದ್ದಾರೆ.
ದೀಪಾವಳಿಗೂ ಎರಡು ದಿನ ಮುಂಚೆ ಪ್ರಧಾನಿ ನರೇಂದ್ರ ಮೋದಿಯವರು ಯುವಕರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ವೇಳೆ ಅವರು ಸಾಂಕೇತಿಕವಾಗಿ ಉದ್ಯೋಗದ ಪತ್ರವನ್ನು ವಿತರಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಕಾರ್ಯಕ್ರಮದಲ್ಲಿ ಕೆಲ ಕೇಂದ್ರ ಸಚಿವರು ಕೂಡಾ ಭಾಗಿಯಾಗಲಿದ್ದಾರೆ.
ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಂದ 75,000 ಮಂದಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ಶನಿವಾರ ನಡೆಯಲಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಉದ್ಯೋಗ ಸೃಷ್ಟಿ ಮಾಡುವಂತೆ ಯುವ ಜನರು ಆಗ್ರಹಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಮೋದಿ ಸರ್ಕಾರ ಈ ನಿರ್ಧಾರ ಕೈಗೊಂಡು 75 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಲು ಮುಂದಾಗಿದೆ.