ಸಮಾಜವಾದಿ ಪಾರ್ಟಿ ನಾಯಕ ಮುಲಾಯಂ ಸಿಂಗ್ ಇನ್ನಿಲ್ಲ
ಗುರುಗ್ರಾಮ್; ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಇಂದು ಬೆಳಗ್ಗೆ ಗುರುಗ್ರಾಮ್ನ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯಕ್ಕೀಡಾಗಿದ್ದ ಮುಲಾಯಂ ಅವರನ್ನು ಆಗಸ್ಟ್ 22 ರಂದು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಕ್ಟೋಬರ್ 1 ರ ರಾತ್ರಿ ಮೂತ್ರಕೋಶ ಸೋಂಕಿನಿಂದಾಗಿ ಮುಲಾಯಂ ಅವರು ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಹೀಗಾಗಿ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಅಂದಿನಿಂದ ತೀವ್ರ ನಿಗಾ ಘಟಕದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು.
2020 ರಲ್ಲಿ ಮುಲಾಯಂ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಅದರಿಂದ ಗುಣಮುಖರಾದರೂ, ಆರೋಗ್ಯ ತೊಂದರೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾ ಬಂದಿದ್ದವು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಸ್ಥಾಪಿಸಿದ್ದ ಮುಲಾಯಂ, ಮೂರು ಬಾರಿ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದರು. ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಅವರು ಕೇಂದ್ರ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.