DistrictsPolitics

ಸಿ.ಟಿ ರವಿಯೇ ಉರಿಗೌಡ, ಅಶ್ವತ್ಥ ನಾರಾಯಣ ನಂಜೇಗೌಡ; ಡಿ.ಕೆ.ಶಿವಕುಮಾರ್‌ ಲೇವಡಿ

ಮಂಡ್ಯ; ಸಿ.ಟಿ ರವಿಯೇ ಉರಿಗೌಡ, ಅಶ್ವತ್ಥ ನಾರಾಯಣ ನಂಜೇಗೌಡ. ಅವರೇ ಹೊಸದಾಗಿ ಕಥೆ ಬರೆಯುತ್ತಿದ್ದಾರೆ. ಸಿನಿಮಾ ಮಾಡಲು ಮತ್ತೊಬ್ಬ ಸಿದ್ಧನಾಗಿದ್ದಾನೆ ಎಂದು ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ. ಆದಿಚುಂಚಗಿರಿ ಮಠದಲ್ಲಿ ಮಾತನಾಡಿದ ಅವರು, ಇದು ಇಡೀ ಒಕ್ಕಲಿಗ ಸಮುದಾಯಕ್ಕೆ ಮಸಿ ಬಳಿಯುವ ಪ್ರಯತ್ನ. ನಾವು ಇದನ್ನು ಖಂಡಿಸುತ್ತೇವೆ. ಈ ವಿಚಾರದಲ್ಲಿ ನಮ್ಮ ಸ್ವಾಮಿಗಳು ಹೋರಾಟದ ನಾಯಕತ್ವ ವಹಿಸಬೇಕೇ ಹೊರತು, ಯಾರನ್ನೋ ಕರೆದು ಸಂಧಾನ ಮಾಡಬಾರದು. ಈ ಸಮಾಜದ ಮಠದ ಪೀಠಾಧಿಪತಿಗಳಾಗಿ ಈ ವಿಚಾರದಲ್ಲಿ ಹೋರಾಟದ ನೇತೃತ್ವ ವಹಿಸುವುದು ಅವರ ಜವಾಬ್ದಾರಿ ಎಂದರು.

ಒಕ್ಕಲಿಗರ ಸಂಘ, ಸಂಸ್ಥೆಗಳು ಸೇರಿದಂತೆ ಹಿಂದೂ ಧರ್ಮದ ಎಲ್ಲಾ ಮಠಾಧೀಶರನ್ನು ಸೇರಿಸಿಕೊಂಡು ಈ ರಾಷ್ಟ್ರದ್ರೋಹಿ, ಸಮಾಜದ್ರೋಹಿಗಳ ವಿರುದ್ಧ ಹೋರಾಟ ಮಾಡಬೇಕಿದೆ. ನಮ್ಮದು ದೊಡ್ಡ ಸಮಾಜ. ಹೀಗಾಗಿ ನಾವು ಭಿಕ್ಷೆ ಬೇಡುವ ಅಗತ್ಯವಿಲ್ಲ. ನಮಗೆ ಛಲ, ಸ್ವಾಭಿಮಾನ ಇದೆ. ನಾವು ಯಾವ ರೀತಿ ಉತ್ತರ ನೀಡಬೇಕೋ ನೀಡುತ್ತೇವೆ. ಅವರು ಸಿನಿಮಾನಾದರೂ ಮಾಡಲಿ, ಏನಾದರೂ ಮಾಡಿಕೊಳ್ಳಲಿ. ಆದರೆ, ಈ ಭೂಮಿ ತಾಯಿಯ ಒಕ್ಕಲುತನ ಮಾಡಿ ಸ್ವಾಭಿಮಾನದಿಂದ ಬದುಕುತ್ತಿರುವ ಈ ಸಮುದಾಯಕ್ಕೆ ಅಪಮಾನ ಮಾಡುವುದು ಬೇಡ. ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತಂದರೆ ನಾವು ಸಹಿಸುವುದಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಅಭ್ಯರ್ಥಿಗಳ ಟಿಕೆಟ್ ಪಟ್ಟಿ ಪ್ರಕಟ ಯಾವಾಗ, ರಮ್ಯಾ ಅವರು ಚನ್ನಪಟ್ಟಣದಿಂದ ಸ್ಪರ್ಧಿಸುತ್ತಾರಾ ಎಂದು ಕೇಳಿದಾಗ, ‘ನಾಳೆ ನಾಡಿದ್ದು ಮೊದಲ ಪಟ್ಟಿ ಅಂತಿಮವಾಗಲಿದೆ. ರಮ್ಯಾ ಅವರ ಸ್ಪರ್ಧೆ ವಿಚಾರವನ್ನು ಅವರಿಗೇ ಕೇಳಿ’ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು. ಡಿ.ಕೆ. ಸುರೇಶ್ ರಾಜ್ಯ ರಾಜಕಾರಣಕ್ಕೆ ಬರುತ್ತಾರಾ ಎಂದು ಕೇಳಿದಾಗ, ‘ಅವರನ್ನು ರಾಮನಗರದಲ್ಲಿ ಕಣಕ್ಕಿಳಿಸಲು ಪಕ್ಷದಲ್ಲಿ ಒತ್ತಡ ಇದೆ. ಆದರೆ ಅವರು ನಾನು ಲೋಕಸಭೆಯಲ್ಲಿ ಉಳಿಯುವುದಾಗಿ ಹೇಳಿದ್ದಾರೆ. ಹೀಗಾಗಿ ರಾಮನಗರದಲ್ಲಿ ಸ್ಥಳೀಯರನ್ನೇ ಅಭ್ಯರ್ಥಿ ಮಾಡುತ್ತೇವೆ’ ಎಂದು ಡಿ.ಕೆ.ಶಿವಕುಮಾರ್‌ ಸ್ಪಷ್ಡಪಡಿಸಿದ್ದಾರೆ.

ಚಿಂಚನಸೂರು ಅವರು ಪಕ್ಷ ಸೇರುತ್ತಾರಾ ಎಂಬ ಪ್ರಶ್ನೆಗೆ, ‘ಅವರು ನನ್ನ ಜತೆ ಮಾತನಾಡಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅವರು ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿಯಾಗಲಿದ್ದಾರೆ’ ಎಂದು ತಿಳಿಸಿದರು. ಚಿಂಚನಸೂರು ಹಾಗೂ ಅವರ ಪತ್ನಿ ಬಂದು ನಾವು ಇದೇ ಪಕ್ಷದಲ್ಲಿ ಇರುತ್ತೇವೆ ಎಂದು ಕಾಲಿಗೆ ಬಿದ್ದಿದ್ದರು ಎಂಬ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಚಿಂಚನಸೂರು ಅವರನ್ನು ರಾಜಕೀಯವಾಗಿ ಬೆಳಸಿ ಮಂತ್ರಿ ಮಾಡಿದ್ದು ಕಾಂಗ್ರೆಸ್. ಕೆಲವು ಭಿನ್ನಾಭಿಪ್ರಾಯಗಳಿಂದ ಪಕ್ಷ ತೊರೆದಿದ್ದರು. ಈಗ ಅಲ್ಲಿ ರಾಜೀನಾಮೆ ನೀಡಿದ್ದಾರೆ. ಬೇಕಾದಷ್ಟು ಮಂದಿ ನಮ್ಮ ಪಕ್ಷದಿಂದ ಅವರ ಪಕ್ಷಕ್ಕೆ ಹೋಗಿದ್ದಾರೆ. ಅಶೋಕ್, ಯಡಿಯೂರಪ್ಪ ಅವರ ಬಗ್ಗೆ ಯಾರು ಏನೆಲ್ಲಾ ಮಾತನಾಡಿದ್ದರು. ಯಡಿಯೂರಪ್ಪನವರ ಬಗ್ಗೆ ಬಿಜೆಪಿ ನಾಯಕರು ಇತ್ತೀಚೆಗೆ ಏನೆಲ್ಲಾ ಮಾತನಾಡುತ್ತಿದ್ದಾರೆ. ದೇವೇಗೌಡರ ಬಗ್ಗೆ ಎ. ಮಂಜು ಅವರು ಏನೆಲ್ಲಾ ಹೇಳಿದ್ದರು. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ನಾವು ಯಾರಿಗೂ ಒತ್ತಡ ಹಾಕಿಲ್ಲ. ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಭವಿಷ್ಯದ ಬೆಳಕು ಕಾಣುತ್ತಿದೆ. ಪುಟ್ಟಣ್ಣ ದಡ್ಡರೇ? ಜೆಡಿಎಸ್ ನಿಂದ ಅನೇಕ ಶಾಸಕರು, ಮಾಜಿ ಶಾಸಕರು, ಹಾಲಿ ಪರಿಷತ್ ಸದಸ್ಯರು ಪಕ್ಷ ಸೇರಿದ್ದಾರೆ. ಅವರು ಕೂಡ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಆಲೋಚಿಸಿ ತೀರ್ಮಾನಿಸುತ್ತಿದ್ದಾರೆ’ ಎಂದರು.

Share Post