ನಾಳೆ ಸದನದಲ್ಲಿ ಸಚಿವರೊಬ್ಬರ ಅಕ್ರಮದ ದಾಖಲೆ ಬಿಡುಗಡೆ; ಮಾಜಿ ಸಿಎಂ ಹೆಚ್ಡಿಕೆ
ಕಲಬುರಗಿ; ರಾಜ್ಯ ಸರ್ಕಾರದ ಸಚಿವರೊಬ್ಬರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಅದನ್ನು ನಾಳೆ ದಾಖಲೆಗಳ ಸಮೇತ ಬಹಿರಂಗ ಮಾಡುತ್ತೇನೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ನಾಳೆ ದಾಖಲೆಗಳನ್ನು ಸದನದಲ್ಲಿಯೇ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ನಾನು ಗಾಳಿಯಲ್ಲಿ ಗುಂಡು ಹಾರಿಸುವುದಿಲ್ಲ. ಹಿಟ್ ಆ್ಯಂಡ್ ರನ್ ಕೂಡಾ ಮಾಡೋದಿಲ್ಲ. ನನ್ನ ಬಗ್ಗೆ ಹಗುರವಾಗಿ ಏಕವಚನದಲ್ಲಿ ಮಾತನಾಡಿದ ಆ ಸಚಿವರಿಗೆ ನಾಳೆ ಬಿಡುಗಡೆ ಮಾಡುವ ದಾಖಲೆ ಸಣ್ಣ ಸ್ಯಾಂಪಲ್ ಅಷ್ಟೇ. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಅಕ್ರಮ ಎಸಗಿದ್ದ ದಾಖಲೆಗಳನ್ನು ಸದನದಲ್ಲಿಯೇ ಬಿಡುಗಡೆ ಮಾಡುತ್ತೇನೆ. ನಾಳೆಯವರೆಗೂ ಕಾಯಿರಿ. ಯಾವ ಸಚಿವರು, ಅವರ ಹೆಸರು ಏನು ಎಂಬುವುದು ಎಲ್ಲವೂ ನಾಳೆ ಸದನದಲ್ಲಿ ಬಹಿರಂಗವಾಗಲಿದೆ ಎಂದು ಹೆಚ್ಡಿಕೆ ಇದೇ ವೇಳೆ ಹೇಳಿದ್ದಾರೆ.