ಸರ್ಕಾರದ ವಿರುದ್ಧ ಕಾಂಗ್ರೆಸ್ ವಿನೂತನ ಪ್ರತಿಭಟನೆ; ನಗರದಲ್ಲಿ ರಾರಾಜಿಸಿದ ʻಪೇಸಿಎಂʼ ಪೋಸ್ಟರ್‌ಗಳು..!
ಬೆಂಗಳೂರು; ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷ ವಿನೂತನ ರೀತಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಂದೋಲನ ನಡೆಸುತ್ತಿದೆ. ಈ ಮೂಲಕ ಜನರನ್ನು ತಲುಪಲು ಪ್ರಯತ್ನಿಸುತ್ತಿದೆ. ಈಗಾಗಲೇ ಹಲವು ಪ್ರಚಾರ ತಂತ್ರಗಳನ್ನು ಬಳಸಿರುವ ಕಾಂಗ್ರೆಸ್ ಇದೀಗ, ರಾಜ್ಯ ಸರ್ಕಾರದ ವಿರುದ್ಧದ ನಲವತ್ತು ಪರ್ಸೆಂಟ್ ಕಮೀಷನ್ ಆರೋಪವನ್ನು ವಿನೂತನ ರೀತಿಯಲ್ಲಿ ಬಳಸಿಕೊಂಡು ಪ್ರತಿಭಟನೆ ವ್ಯಕ್ತಪಡಿಸಿದೆ.
ಬೆಂಗಳೂರು ನಗರದಲ್ಲಿ ಅಲ್ಲಲ್ಲಿ ಕ್ಯೂ ಆರ್ ಕೋಡ್ ಇರುವ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಪೇಟಿಎಂ ಕ್ಯೂಆರ್ ಕೋಡ್‌ನಂತೆ ಪೋಸ್ಟರ್‌ಗಳನ್ನು ಡಿಸೈನ್ ಮಾಡಲಾಗಿದೆ. ಆದ್ರೆ ಅದು ಪೇಟಿಎಂ ಕ್ಯೂಆರ್ ಕೋಡ್ ಅಲ್ಲ. ಪೇಟಿಎಂ ಬದಲಾಗಿ ಅದರ ಮೇಲೆ ʻಪೇ ಸಿಎಂʼ (PayCM) ಎಂದು ಬರೆಯಲಾಗಿದೆ. ಇನ್ನು ಕ್ಯೂಆರ್ ಕೋಡ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರ ಚಿತ್ರ ಹಾಕಲಾಗಿದೆ. ರಾಜ್ಯ ಬಿಜೆಪಿ ಸರ್ಕಾರ ʻಶೇ 40 ಕಮಿಷನ್ ಸರ್ಕಾರ’ವೆಂದು ಆರೋಪಿಸಿ ಕಾಂಗ್ರೆಸ್ ಈ ರೀತಿಯ ವಿನೂತನ ಅಭಿಯಾನ ಆರಂಭಿಸಿದೆ.
ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ರಾಜ್ಯ ಸರ್ಕಾರದ ವಿರುದ್ಧದ ದೂರುಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಘಟಕ ಇತ್ತೀಚೆಗೆ ಬಿಡುಗಡೆ ಮಾಡಿದ ‘ಶೇ 40 ಕಮಿಷನ್ ಸರ್ಕಾರ’ ವೆಬ್ ಸೈಟ್ ಓಪನ್ ಆಗುತ್ತದೆ.