CrimeNational

ಜ್ಞಾನವಾಪಿ ಮಸೀದಿ ಆವರಣದಲ್ಲಿ ಪೂಜೆಗೆ ಅವಕಾಶ; ಅರ್ಜಿ ವಿಚಾರಣೆಗೆ ಸ್ವೀಕಾರ

ವಾರಾಣಸಿ; ಜ್ಞಾನವಾಪಿ ಮಸೀದಿ ಆವರಣದಲ್ಲಿವೆ ಎನ್ನಲಾದ ಶೃಂಗಾರ ಗೌರಿ, ಶಿವಲಿಂಗ ದರ್ಶನ ಹಾಗೂ ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ಕೋರಿ ರಾಖಿಸಿಂಗ್ ಸೇರಿ ನಾಲ್ವರು ಮಹಿಳೆಯರು ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ವಾರಾಣಸಿ ಜಿಲ್ಲಾ ಕೋರ್ಟ್‌ ಅಂಗೀಕರಿಸಿದೆ. ಇದರಿಂದಾಗಿ ಹಿಂದೂ ಅರ್ಜಿದಾರರಿಗೆ ಮೊದಲ ಗೆಲುವು ಸಿಕ್ಕಂತಾಗಿದೆ. 

ಪೂಜೆಗೆ ಅವಕಾಶ ನೀಡುವ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್‌ ಈ ಕುರಿತ ಅರ್ಜಿ, ವಿಚಾರಣೆಗೆ ಯೋಗ್ಯವೆಂದು ಆದೇಶ ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು ಕೋಮು ಸೂಕ್ಷ್ಮ ಪ್ರಕರಣದ ಆದೇಶವನ್ನು ಸೆಪ್ಟೆಂಬರ್ 12 ರವರೆಗೆ ಕಾಯ್ದಿರಿಸಿದ್ದರು. ಇದಕ್ಕೂ ಮುನ್ನ ಜ್ಞಾನವ್ಯಾಪಿ ಮಸೀದಿಯಲ್ಲಿ ಉತ್ಖನನ ನಡೆಸಲು ಕೆಳ ಹಂತದ ನ್ಯಾಯಾಲಯ ಅನುಮತಿ ನೀಡಿತ್ತು. ಪರಿಶೀಲನೆ ವೇಳೆ ಮಸೀದಿಯ ಆವರಣದಲ್ಲಿದ್ದ ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿದೆ ಹಾಗೂ ಮಂಗಳ ಗೌರಿಯ ದೇವಸ್ಥಾನ ಇದೆ ಎಂದು ಅಧಿಕಾರಿಗಳು ಕೋರ್ಟ್‍ಗೆ ವರದಿ ನೀಡಿದ್ದರು.

ಈ ನಡುವೆ ಐವರು ಮಹಿಳೆಯರು ಮಸೀದಿಯಲ್ಲಿ ಪತ್ತೆಯಾಗಿದೆ ಎನ್ನಲಾದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಕೋರ್ಟ್ ಮೇಟ್ಟಿಲೇರಿದ್ದರು. ಮುಸ್ಲಿಮರ ಪರ ವಾದ ಮಂಡಿಸಿದ ವಕೀಲರು 1991ರ ವಿಶೇಷ ಪೂಜಾ ಸ್ಥಳ ಕಾಯ್ದೆಯನ್ನು ಪ್ರಮುಖವಾಗಿ ವಿಚಾರಣೆ ವೇಳೆ ಉಲ್ಲೇಖಿಸಿದ್ದರು. 1991ರ ಪೂಜಾ ಸ್ಥಳಗಳ ಕಾಯ್ದೆ ಪ್ರಕಾರ ದೇಶದ ಯಾವುದೇ ಧಾರ್ಮಿಕ ಸ್ಥಳದಲ್ಲಿ ಸದ್ಯ ಚಾಲ್ತಿಯಲ್ಲಿ ಇರುವ ಯಾವುದೇ ಧರ್ಮದ ಆಚರಣೆಯ ಧಾರ್ಮಿಕ ಸ್ವರೂಪವನ್ನು ಬದಲಿಸುವಂತಿಲ್ಲ ಎಂದು ವಾದ ಮಾಡಿದ್ದರು. ಆದ್ರೆ ಕೋರ್ಟ್‌, ವಿಚಾರಣೆಗೆ ಅಸ್ತು ಎಂದಿದೆ.

 

Share Post