BengaluruPolitics

ನಲವತ್ತು ಪರ್ಸೆಂಟ್‌ ಕಮೀಷನ್‌ ಆರೋಪ; ದಾಖಲೆ ಕೊಟ್ಟರೆ ತನಿಖೆ; ಸಿಎಂ ಬೊಮ್ಮಾಯಿ

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾಮಗಾರಿ ಬಿಲ್‌ ಪಾವತಿ ಮಾಡಲು ಗುತ್ತಿಗೆದಾರರಿಂದ ಶೇಕಡಾ 40ರಷ್ಟು ಲಂಚ ಪಡೆಯಲಾಗುತ್ತಿದೆ ಎಂಬ ಆರೋಪ ಮತ್ತೆ ಪ್ರತಿಧ್ವನಿಸುತ್ತಿದೆ. ಗುತ್ತಿಗೆದಾರರ ಸಂಘದಿಂದ ಈ ಬಗ್ಗೆ ಬಿಬಿಎಂಪಿ ಆಯುಕ್ತರಿಗೆ ದೂರು ನೀಡಲಾಗಿದೆ. ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಗೆ ದೂರು ನೀಡಲು ನಿರ್ಧರಿಸಲಾಗಿದೆ. ಗುತ್ತಿಗೆದಾರರ ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳೊಂದಿಗೆ ದೂರು ನೀಡಿದರೆ ತನಿಖೆ ನಡೆಸಿ, ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ವಿವಿಧ ಇಲಾಖೆಗಳಲ್ಲಿ ಲಂಚದ ಹಾವಳಿ ನಿಂತಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಮತ್ತೊಮ್ಮೆ ಆರೋಪ ಮಾಡಿದ್ದಾರೆ. ಈ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ, ಸುಮ್ಮನೆ ಆರೋಪ ಮಾಡಿದರೆ ಸಾಲದು. ದಾಖಲೆ ಸಹಿತ ಅವರು ದೂರು ಕೊಡಲಿ ಎಂದಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಹಿಂದೆಯೂ ಆರೋಪ ಮಾಡಿದ್ದರು. ಪ್ರಧಾನಿಯವರಿಗೂ ಪತ್ರ ಬರೆದಿದ್ದರು. ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಜತೆ ಸಭೆ ನಡೆಸಿ ಅವರ ಅಹವಾಲು ಆಲಿಸಿದ್ದೆ. ಅವರ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮಗಳನ್ನೂ ಕೈಗೊಂಡಿದ್ದೇನೆ ಎಂದು ಸಿಎಂ ಬೊಮ್ಮಾಯಿ ಇದೇ ವೇಳೆ ಸ್ಪಷ್ಟನೆ ನೀಡಿದ್ದಾರೆ.

ಯಾವುದೇ ಆರೋಪ ಮಾಡಿದರೂ ಆಧಾರಗಳನ್ನು ಒದಗಿಸಬೇಕು. ದಾಖಲೆಗಳನ್ನು ನೀಡದೇ ಆರೋಪ ಮಾಡಿದರೆ ಕ್ರಮ ಜರುಗಿಸಲು ಹೇಗೆ ಸಾಧ್ಯ ಎಂದು ಮುಖ್ಯಮಂತ್ರಿ ಕೇಳಿದರು.

Share Post