ಕೊರಟಗೆರೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಜಟಾಪಟಿ; ಫೆಕ್ಸ್ ವಿಚಾರಕ್ಕೆ ರಂಪಾಟ
ತುಮಕೂರು; ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಫ್ಲೆಕ್ಸ್ ಹಾಕುವ ವಿಚಾರಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ. ಇದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ಸ್ಥಳೀಯ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಆಗಸ್ಟ್ 8 ರಂದು ಮಾಜಿ ಸಚಿವ ಡಾ.ಜಿ.ಪರಮೇಶ್ವರ್ ಅವರ ಜನ್ಮದಿನವಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೊರಟಗೆರೆ ಪಟ್ಟಣದ ಸರ್ಕಲ್ನಲ್ಲಿ ಫೆಕ್ಸ್ ಹಾಕಿದ್ದರು. ಇದೀಗ ಜೆಡಿಎಸ್ ಮಾಜಿ ಶಾಸಕ ಸುಧಾಕರ್ ಲಾಲ್ ಅವರ ಹುಟ್ಟುಹಬ್ಬ ನಾಳೆ ಇದೆ. ಈ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಕೊರಟಗೆರೆ ನಗರದಲ್ಲಿ ಫೆಕ್ಸ್ ಹಾಕುತ್ತಿದ್ದಾರೆ. ಸರ್ಕಲ್ನಲ್ಲಿ ಹಾಕಲಾಗಿದ್ದ ಜಿ.ಪರಮೇಶ್ವರ್ ಫ್ಲೆಕ್ಸ್ ತೆಗೆದು ಸುಧಾಕರ್ ಲಾಕ್ ಫ್ಲೆಕ್ಸ್ ಹಾಕಲು ಮುಂದಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಪರಮೇಶ್ವರ್ ಬೆಂಬಲಿಗರು, ಜೆಡಿಎಸ್ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡೂ ಗುಂಪುಗಳ ನಡುವೆ ವಾಗ್ವಾದ ನೂಕಾಟ-ತಳ್ಳಾಟ ನಡೆದಿದೆ. ಅಷ್ಟೇ ಅಲ್ಲದೆ ಕೈಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ಬಿಗಡಾಯಿಸಿತ್ತು. ಆದ್ರೆ ಸ್ಥಳಕ್ಕೆ ಬಂದ ಪೊಲೀಸರು ಎಲ್ಲವನ್ನೂ ತಿಳಿಗೊಳಿಸಿದ್ದಾರೆ.