NationalPolitics

ನಿನ್ನೆ ರಾಜೀನಾಮೆ; ಇಂದು ಮತ್ತೆ ಸಿಎಂ ಸ್ಥಾನಕ್ಕೇರಲಿರುವ ನಿತೀಶ್‌ ಕುಮಾರ್‌

ಪಟ್ನಾ; ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡು ನಿನ್ನೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್‌ ಕುಮಾರ್‌ ಇಂದು ಮತ್ತೆ ಬಿಹಾರಸ ಸಿಎಂ ಆಗುತ್ತಿದ್ದಾರೆ. ಈ ಬಾರಿ ಆರ್‌ಜೆಡಿ ಬೆಂಬಲದೊಂದಿಗೆ ಅವರು ಸಿಎಂ ಸ್ಥಾನಕ್ಕೇರುತ್ತಿದ್ದಾರೆ. ಇಂದು ಮಧ್ಯಾಹ್ನ ೨ ಗಂಟೆಗೆ ಬಿಹಾರ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ನಿನ್ನೆ ಬಿಜೆಪಿಯ ಸಖ್ಯ ತೊರೆದ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರು ರಾಜ್ಯಪಾಲ ಫಗು ಚೌಹಾಣ್‌ ಅವರನ್ನು ಎರಡೆರಡು ಬಾರಿ ಭೇಟಿಯಾದರು. ಮೊದಲ ಬಾರಿ ಭೇಟಿಯಾಗಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು. ಬಳಿಕ, ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹಕ್ಕು ಮಂಡಿಸಿದರು. ಇಂದು ನಿತೀಸ್‌ ಕುಮಾರ್‌ ಜೊತೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ನಿತೀಶ್‌ ಅವರು ತಮಗೆ 164 ಶಾಸಕರ ಬೆಂಬಲ ಇದೆ ಎಂದಿದ್ದಾರೆ. ಈ ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ವಿಧಾನಸಭೆಯ ಸದಸ್ಯ ಬಲ 242 ಇದ್ದು, ಸರಳ ಬಹುಮತಕ್ಕೆ 123 ಶಾಸಕರ ಬೆಂಬಲ ಬೇಕಿದೆ.

ನಿತೀಶ್‌ ಅವರು 2017ರವರೆಗೆ ಮಹಾಮೈತ್ರಿಕೂಟದ ಭಾಗವಾಗಿಯೇ ಇದ್ದರು. ಆದರೆ, 2017ರಲ್ಲಿ ಮಹಾಮೈತ್ರಿಕೂಟ ತೊರೆದು ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿಕೊಂಡರು. ಮಹಾಮೈತ್ರಿಕೂಟಕ್ಕೆ ಸೇರುವ ಮೊದಲೂ ಅವರು ಎನ್‌ಡಿಎಯಲ್ಲಿಯೇ ಇದ್ದರು. ಈಗ, 9 ವರ್ಷಗಳಲ್ಲಿ ಎರಡನೇ ಬಾರಿಗೆ ಬಿಜೆಪಿ ಜತೆಗಿನ ನಂಟನ್ನು ಅವರು ಕಡಿದುಕೊಂಡಿದ್ದಾರೆ.

Share Post