Bengaluru

ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್‌; ಭತ್ಯೆ, ವೇತನದಲ್ಲಿ ಹೆಚ್ಚಳ

ಬೆಂಗಳೂರು; ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಜ್ಯ 6ನೇ ವೇತನ ಆಯೋಗ ಶಿಫಾರಸಿನಂತೆ ಈ ತಿಂಗಳಿಂದ ಜಾರಿಗೆ ಬರುವಂತೆ ವೇತನ‌ ಹಾಗೂ ಭತ್ಯೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ 6ನೇ ವೇತನ ಆಯೋಗ 2018ರಲ್ಲಿ ಕೆಲ ನಿರ್ದಿಷ್ಟ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳನ್ನು ಮೇಲ್ದರ್ಜೆಗೇರಿಸುವಂತೆ ಶಿಫಾರಸು ಮಾಡಿತ್ತು.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶಿಫಾರಸು ಜಾರಿ ಸಂಬಂಧ ಸಮಿತಿಯೊಂದನ್ನು ರಚಿಸಿತ್ತು. ಸಮಿತಿ ವರದಿಯನ್ನು ನೀಡಿದ್ದು, ಅದರಂತೆ ಇದೀಗ ರಾಜ್ಯ ಸರ್ಕಾರ ವೇತನ ಪರಿಷ್ಕರಣೆ ಆದೇಶ ಹೊರಡಿಸಿದೆ. ಆಗಸ್ಟ್ 1ರಿಂದ ಈ ಪರಿಷ್ಕೃತ ವೇತನ, ಭತ್ಯೆ ಆದೇಶ ಜಾರಿಗೆ ಬರಲಿದೆ.

ಪುರಾತತ್ವ ಹಾಗೂ ಮ್ಯೂಸಿಯಂ ಇಲಾಖೆಯ ಸಹಾಯಕ ಕ್ಯುರೇಟರ್ ಮತ್ತು ಸರ್ವೇಯರ್, ಸಹಾಯಕ ಪುರಾತತ್ವ ಅಧಿಕಾರಿ, ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕರುಗಳ ವೇತನವನ್ನು ಪರಿಷ್ಕರಿಸಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಮ ಶಾಲಾ ಉಪನ್ಯಾಸಕರ ವೇತನ ಪರಿಷ್ಕರಣೆ ಮಾಡಲಾಗಿದೆ. ಅಬಕಾರಿ ಇಲಾಖೆಯ ಉಪ ಅಧೀಕ್ಷಕರು, ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡ್ಸ್, ಉಪ ವಲಯ ಅರಣ್ಯಾಧಿಕಾರಿಗಳು, ಮಾವುತರು, ಕಾವಾಡಿಗಳು, ಜಮೇದಾರರ ವೇತನ ಪರಿಷ್ಕರಿಸಲಾಗಿದೆ.

Share Post