ಮಮತಾ ಬ್ಯಾನರ್ಜಿ ಮನೆಗೆ ನುಗ್ಗಿದ ದುಷ್ಕರ್ಮಿ; ಬೆಳಗ್ಗೆ ಭದ್ರತಾ ಸಿಬ್ಬಂದಿಯಿಂದ ಬಂಧನ
ಕೋಲ್ಕತ್ತ; ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿವಾಸದಲ್ಲಿ ಭದ್ರತಾ ಲೋಪವಾಗಿದೆ. ದುಷ್ಕರ್ಮಿಯೊಬ್ಬ ಮಧ್ಯರಾತ್ರಿ ಮಮತಾ ಬ್ಯಾನರ್ಜಿ ಅವರ ಮನೆಗೆ ನುಗ್ಗಿದ್ದು, ಬೆಳಗ್ಗೆವರೆಗೂ ಅಲ್ಲಿಯೇ ಕಳೆದಿದ್ದಾರೆ. ಆದ್ರೆ ಬೆಳಗ್ಗೆವರೆಗೂ ಇದು ಭದ್ರತಾ ಸಿಬ್ಬಂದಿ ಗಮನಕ್ಕೇ ಬಂದಿಲ್ಲ.
ದಕ್ಷಿಣ ಕೋಲ್ಕತ್ತದ ಕಾಳಿಘಾಟ್ ಪ್ರದೇಶದ ಹರೀಶ್ ಚಟರ್ಜಿ ರಸ್ತೆಯಲ್ಲಿ ಮಮತಾ ಬ್ಯಾನರ್ಜಿ ಅವರ ನಿವಾಸವಿದೆ. ಇಲ್ಲಿಗೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಗೋಡೆ ಹಾರಿ ವ್ಯಕ್ತಿಯೊಬ್ಬ ಒಳನುಗ್ಗಿದ್ದಾನೆ. ಆ ವ್ಯಕ್ತಿ ಮಮತಾ ಬ್ಯಾನರ್ಜಿಯವರ ಮನೆಯ ಮೂಲೆಯೊಂದರಲ್ಲಿ ಬೆಳಗಾಗುವವರೆಗೂ ಕುಳಿತುಕೊಂಡಿದ್ದ. ಬೆಳಗಾದ ಮೇಲೆ ಭದ್ರತಾ ಸಿಬ್ಬಂದಿ ಆತನನ್ನು ಗಮನಿಸಿ ಬಂಧಿಸಿದ್ದಾರೆ.
ಅಂದಹಾಗೆ ಮಮತಾ ಬ್ಯಾನರ್ಜಿಯವರಿಗೆ ಝೆಡ್ ಪ್ಲಸ್ ಭದ್ರತೆ ಇದೆ. ಬಿಗಿ ಭದ್ರತೆ ಇರುವ ಸಿಎಂ ನಿವಾಸಕ್ಕೆ ವ್ಯಕ್ತಿ ಅಕ್ರಮವಾಗಿ ಪ್ರವೇಶಿಸಿರುವುದು ಮತ್ತು ಅಲ್ಲಿಯೇ ಯಾರ ಗಮನಕ್ಕೂ ಬಾರದಂತೆ ಸಮಯ ಕಳೆದಿರುವುದು ಭದ್ರತಾ ಲೋಪವಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಮನೆಗೆ ನುಗ್ಗಿದ್ದ ವ್ಯಕ್ತಿಯ ಉದ್ದೇಶವೇನಿತ್ತು ಎಂದು ತನಿಖೆ ನಡೆಸಲಾಗುತ್ತಿದೆ. ಆತ ಮಾನಸಿಕ ಅಸ್ವಸ್ಥನಂತೆ ಕಾಣಿಸುತ್ತಿದ್ದಾನೆ ಎಂದು ಅಧಿಕಾರಿಯೋಬ್ಬರು ತಿಳಿಸಿದ್ದಾರೆ.