ಅಫ್ಘಾನಿಸ್ತಾನದಲ್ಲಿ ಭೂಕಂಪ; ಮೃತರ ಸಂಖ್ಯೆ ಸಾವಿರಕ್ಕೆ ಏರಿಕೆ
ಕಾಬೂಲ್; ಕಳೆದ ರಾತ್ರಿ ಅಫ್ಘಾನಿಸ್ತಾನದಲ್ಲಿ ನಡೆದ ಭೀಕರ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಸಾವಿರ ದಾಟಿದೆ ಎಂದು ಹೇಳಲಾಗುತ್ತಿದೆ. ದೇಶದ ಆಗ್ನೇಯ ಭಾಗದಲ್ಲಿರುವ ಖೋಸ್ಟ್ ನಗರದ ಬಳಿ ತೀವ್ರ ಭೂಕಂಪ ಸಂಭವಿಸಿತ್ತು. ಖೋಸ್ಟ್ ಪ್ರಾಂತ್ಯದ ಸ್ಪೆರಾ ಜಿಲ್ಲೆ ಮತ್ತು ಪಕ್ಟಿಕಾ ಪ್ರಾಂತ್ಯದ ಬರ್ಮಲಾ, ಜಿರುಕ್, ನಾಕಾ ಮತ್ತು ಗಯಾನ್ ಜಿಲ್ಲೆಗಳು ಹೆಚ್ಚು ಹಾನಿಗೆ ಒಳಗಾಗಿವೆ.
ಭೂಕಂಪದಿಂದಾಗಿ 1,000 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 1,500 ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಭೂಕಂಪನದಿಂದಾಗಿ ಅನೇಕ ಹಳ್ಳಿಗಳು ನಾಶವಾಗಿವೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಹೆಲಿಕಾಪ್ಟರ್ ಹಾಗೂ ರಕ್ಷಣಾ ತಂಡ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.