National

ಅಗ್ನಿಪಥ್‌ಗೆ ವಿರೋಧ; ಬಿಹಾರದಲ್ಲಿ ಮುಂದುವರೆದ ಹಿಂಸಾಚಾರ

ಪಾಟ್ನಾ; ಸೈನಿಕರ ನೇಮಕಾತಿಗಾಗಿ ಅಗ್ನಿಪಥ ಎಂಬ ಹೊಸ ನೀತಿ ಜಾರಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರ ಇವತ್ತೂ ಮುಂದುವರೆದಿದೆ. ಇಂದು ಆರ್‌ಜೆಡಿಯಿಂದ ಬಿಹಾರ ಬಂದ್‌ಗೆ ಕರೆ ನೀಡಲಾಗಿದೆ. ಈ ನಡುವೆ ಪ್ರತಿಭಟನಾಕಾರರು ಜೆಹನಾಬಾದ್‌ನಲ್ಲಿ ಬಸ್‌, ಟ್ರಕ್‌ ಹಾಗೂ ಎರಡು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ರಸ್ತೆ ಪಕ್ಕದಲ್ಲಿ ಸರ್ಕಾರಿ ಬಸ್‌ ಒಂದು ಧಗಧಗನೆ ಹೊತ್ತಿ ಉರಿದಿದೆ.

ಪಟ್ನಾ–ಗಯಾ ಗೆದ್ದಾರಿಯಲ್ಲಿರುವ ತೆಹ್ತಾ ಪೊಲೀಸ್‌ ಔಟ್‌ಪೋಸ್ಟ್‌ ಬಳಿ ಈ ಘಟನೆ ನಡೆದಿದೆ. ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಾಟವನ್ನೂ ನಡೆಸಿದ್ದಾರೆ. ಈ ವೇಳೆ ಠಾಣೆಯ ಉಸ್ತುವಾರಿ, ಸಬ್‌ ಇನ್‌ಸ್ಪೆಕ್ಟರ್‌ ಧೀರಜ್‌ ಕುಮಾರ್‌ ಗಾಯಗೊಂಡಿದ್ದಾರೆ. ಗಲಭೆ ವರದಿಯಾಗುತ್ತಿದ್ದಂತೆಯೇ ಜೆಹನಾಬಾದ್‌ ಜಿಲ್ಲಾಧಿಕಾರಿ ಹಾಗೂ ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌, ಹೆಚ್ಚಿನ ಸಂಖ್ಯೆಯ ಪೊಲೀಸ್‌ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಲಾಗಿದೆ.

ಗಲಭೆ ಪೀಡಿತ ಕೈಮುರ್‌, ರೊಹ್ತಾಸ್‌, ಭೋಜ್‌ಪುರ್, ಔರಂಗಾಬಾದ್‌, ಬಕ್ಸಾರ್‌, ನವಾಡ, ಪಶ್ಚಿಮ ಚಂಪಾರಣ್‌, ಸಮಸ್ತಿಪುರ್‌, ಲಖಿಸರಾಯ್, ಬೇಗುಸರಾಯ್‌, ವೈಶಾಲಿ ಹಾಗೂ ಸರಾನ್‌ ಜಿಲ್ಲೆಗಳಲ್ಲಿ ಫೋನ್‌ ಹಾಗೂ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ. ರಾಜಧಾನಿ ಪಾಟ್ನಾ ಸೇರಿದಂತೆ, ಈ ಜಿಲ್ಲೆಗಳಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

Share Post