ಮೋದಿ ನೇತೃತ್ವದಲ್ಲಿ ರಾಷ್ಟ್ರಸೇವೆಗಾಗಿ ಕೆಲಸ ಮಾಡುತ್ತೇನೆ; ಹಾರ್ದಿಕ್ ಪಟೇಲ್
ಅಹಮದಾಬಾದ್; ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷ ತೊರೆದಿದ್ದ ಗುಜರಾತ್ ಪಾಟೀದಾರ್ ಮೀಸಲಾತಿ ಆಂದೋಲನದ ನಾಯಕ ಹಾರ್ದಿಕ್ ಪಟೇಲ್ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ರಾಷ್ಟ್ರಹಿತ, ಜನರ ಹಿತ ಹಾಗೂ ಸಮಾಜ ಹಿತದ ದೃಷ್ಟಿಯಿಂದ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇನೆ. ಭಾರತದ ಯಶಸ್ವಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಷ್ಟ್ರ ಸೇವೆಯ ಭಗೀರಥ ಕಾರ್ಯದಲ್ಲಿ ಯೋಧನಾಗಿ ಕೆಲಸ ನಿರ್ವಹಿಸುತ್ತೇನೆ ಎಂದಿದ್ದಾರೆ.
ಹಾರ್ದಿಕ್ ಪಟೇಲ್ ಅವರು ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅತಿಹೆಚ್ಚು ಟೀಕೆ ಮಾಡುತ್ತಿದ್ದರು. ಕೆಲ ವರ್ಷಗಳ ಹಿಂದೆ ಸೂರತ್‌ನಲ್ಲಿ ಅಮಿತ್ ಶಾ ಭಾಷಣ ಮಾಡುತ್ತಿದ್ದ ವೇಳೆ ಹಾರ್ದಿಕ್ ಪಟೇಲ್ ಬೆಂಬಲಿಗರು ದೊಡ್ಡ ಗಲಾಟೆ ಮಾಡಿದ್ದರು. ಅಷ್ಟೇ ಏಕೆ ಬಿಜೆಪಿ ಕಾರ್ಯವೈಖರಿ, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನೂ ಹಾರ್ದಿಕ್ ಪಟೇಲ್ ಕಟುವಾಗಿ ಟೀಕಿಸಿದ್ದರು. 2017ರಲ್ಲಿ ಅವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು. ಇದೀಗ ಅವರು ಕಾಂಗ್ರೆಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.