ನ್ಯಾಷನಲ್ ಹೆರಾಲ್ಡ್ ಕೇಸ್; ಸೋನಿಯಾ, ರಾಹುಲ್‌ಗೆ ಸಮನ್ಸ್
ನವದೆಹಲಿ; ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದು ಹಾಜರಾಗುವಂತೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ.
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ನೀಡಿರುವ ದೂರಿನ ಆಧಾರದ ಮೇಲೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ನಾಳೆ ವಿಚಾರಣೆಗೆ ಹಾಜರಾಗುವಂತೆ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಗೆ ಸಮನ್ಸ್ ನೀಡಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಹಾಗೂ ಸೋನಿಯಾಗಾಂಧಿಯವರಿಗೆ ಕಾನೂನು ಕಂಟಕ ಎದುರಾಗಿದೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಸೋನಿಯಾಗಾಂಧಿ, ಬಿಜೆಪಿ ಸರ್ಕಾರ ಐಟಿ, ಇಡಿ ಬಳಸಿಕೊಂಡು ಕಾಂಗ್ರೆಸ್ ನಾಯಕರನ್ನು ಹೆದರಿಸುವ ತಂತ್ರ ಮಾಡುತ್ತಿದೆ. ಅಕ್ರಮ ಹಣ ವರ್ಗಾವಣೆ ವಿಷಯವೇ ಇಲ್ಲ. ಆದರೂ ಸಮನ್ಸ್ ನೀಡಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ..?
1. ಜನವರಿ 2013ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು ದೆಹಲಿ ಪಟಿಯಾಲಾ ಹೌಸ್ ಕೋರ್ಟ್‌ನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಕಂಪನಿ ಮತ್ತು ಸಂಬಂಧಿತ ವ್ಯಕ್ತಿಗಳ ವಿರುದ್ಧ ದೂರು ಸಲ್ಲಿಸಿದ್ದರು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಒಡೆತನದ ಯಂಗ್ ಇಂಡಿಯನ್ ಎಂಬ ಸಂಸ್ಥೆಯು ಜವಾಹರಲಾಲ್ ನೆಹರು ಅವರು ಸ್ಥಾಪಿಸಿದ್ದ, ‘ಕ್ವಾಮಿ ಆವಾಜ್’ ಮತ್ತು ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಕಂಪನಿಯನ್ನು(ಎಜೆ) ವಶಪಡಿಸಿಕೊಂಡಿದೆ ಎಂದು ತಮ್ಮ ಅರ್ಜಿಯಲ್ಲಿ ಸ್ವಾಮಿ ಆರೋಪಿಸಿದ್ದರು
2. ಎಜೆಎಲ್ ಕಂಪನಿ ಖರೀದಿ ಮಾಡುವುದರ ಮೂಲಕ ಯಂಗ್ ಇಂಡಿಯನ್ ಕಂಪನಿಯಲ್ಲಿ ಹೆಚ್ಚಿನ ಶೇರುಗಳನ್ನು ಹೊಂದಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹೆಚ್ಚಿನ ಲಾಭವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ಎಜೆಎಲ್‌ಗೆ ಸೇರಿದ ಆಸ್ತಿಗಳೂ ಯಂಗ್ ಇಂಡಿಯನ್ ಕಂಪನಿಯ ಪಾಲಾಗಿವೆ. ಎಜೆಎಲ್ ಕಾಂಗ್ರೆಸ್ ಪಕ್ಷದ ನಿಧಿಯಿಂದ 90 ಕೋಟಿ ರೂಪಾಯಿ ಹಣವನ್ನು ಅಸೋಸಿಯೇಟೆಡ್ ಜರ್ನಲ್ಸ್ ಕಂಪನಿಗೆ ಶೂನ್ಯ ಬಡ್ಡಿದರದಲ್ಲಿ ವರ್ಗಾಯಿಸಿದೆ.
3. ಆ ಸಮಯದಲ್ಲಿ ಎಜೆಎಲ್ ಅಧ್ಯಕ್ಷರಾಗಿದ್ದ ಮೋತಿ ಲಾಲ್ ವೋರಾ ಸಾಲ ಮರುಪಾವತಿ ಮಾಡಲು ಸಾಧ್ಯವಿಲ್ಲ ಎಂದರು ಹಾಗೂ ಕಂಪನಿ ಮತ್ತು ಅದರ ಸ್ವತ್ತುಗಳನ್ನು ಯಂಗ್ ಇಂಡಿಯನ್ ಕಂಪನಿಗೆ ವರ್ಗಾಯಿಸಲು ಒಪ್ಪಿಕೊಂಡರು.
4. ಯಾವುದೇ ರಾಜಕೀಯ ಪಕ್ಷ ದೇಣಿಗೆ ಸ್ವೀಕರಿಸಬಹುದೇ ಹೊರತು, ವಾಣಿಜ್ಯ ಕಾರಣಕ್ಕಾಗಿ ಸಾಲ ನೀಡುವಂತಿಲ್ಲ. ಇಲ್ಲಿ ಕಾನೂನು ಲೋಪವಾಗಿರುವುದು ಎದ್ದು ಕಾಣುತ್ತಿದೆ. ಇದಕ್ಕೆ ಸೋನಿಯಾ ಗಾಂಧಿಯವರ ಸಹಿಯೂ ಇದೆ. ಸಾಲ ತೀರಿಸಲಾಗಲ್ಲ ಎಂದು ಕೊನೆಗೆ ಸಾಲ ಮನ್ನಾ ಮಾಡಲಾಯಿತು. ನಂತರ ನ್ಯಾಷನಲ್ ಹೆರಾಲ್ಡ್‌ನ ಕಟ್ಟಡವನ್ನು ವಾಣಿಜ್ಯ ಬಳಕೆಗೆ ನೀಡಲಾಯಿತು. ಸ್ವಾತಂತ್ರ್ಯ ಸೇನಾನಿಗಳ ದೇಣಿಗೆಯಿಂದ ಆರಂಭವಾದ ಕಂಪನಿ ಸೋನಿಯಾ ಕೈವಶವಾಯಿತು. ಇದರ ಮೌಲ್ಯ ಐದು ಸಾವಿರ ಕೋಟಿ ರೂಪಾಯಿ. ಪಕ್ಷಕ್ಕೆ ಬಂದ ದೇಣಿಗೆಯ 90 ಕೋಟಿ ರೂಪಾಯಿಯನ್ನು ಸಾಲ ನೀಡಿ ಐದು ಸಾವಿರ ಕೋಟಿ ರೂಪಾಯಿ ಆಸ್ತಿಯನ್ನು ತಮ್ಮದಾಗಿಸಿಕೊಳ್ಳಲಾಗಿದೆ ಎಂಬುದು ಸ್ವಾಮಿಯವರ ಆರೋಪ.
5. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜತೆಗೆ ಸುಮನ್ ದುಬೆ, ಮೋತಿ ಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸ್ಯಾಮ್ ಪಿತ್ರೋಡಾ ಮತ್ತು ಯಂಗ್ ಇಂಡಿಯಾ ಲಿಮಿಟೆಡ್ ಕಂಪನಿ ಪ್ರಕರಣದ ಆರೋಪಿಗಳಾಗಿದ್ದಾರೆ.