ಸ್ಕ್ರ್ಯಾಪ್ ಬಾಬು ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ರೇಡ್
ಬೆಂಗಳೂರು; ಸ್ಕ್ರ್ಯಾಪ್ ಬಾಬು ಎಂದೇ ಹೆಸರಾಗಿರುವ ಉದ್ಯಮಿ ಕೆಜಿಎಫ್ ಬಾಬು ಮನೆ ಹಾಗೂ ವಿವಿಧ ಆಸ್ತಿಗಳ ಮೇಲೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬಾಬು ಅವರಿಗೆ ಸೇರಿದ 7 ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದಾರೆ.
ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿರುವ ಕೆಜಿಎಫ್ ಬಾಬು ಇತ್ತೀಚೆಗೆ ಕಾಂಗ್ರೆಸ್ ಪಕ್ಷದಿಂದ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದ್ದರು. ಈ ವೇಳೆ ಅವರು ಘೋಷಿಸಿಕೊಂಡಿದ್ದ ಆಸ್ತಿಯ ಮೌಲ್ಯ ಬರೋಬ್ಬರಿ 1741 ಕೋಟಿ ರೂಪಾಯಿ. ಆದಾಯ ತೆರಿಗೆಯಲ್ಲಿ ವ್ಯತ್ಯಯ ಕಂಡುಬಂದ ಹಿನ್ನೆಲೆಯಲ್ಲಿ ಇವತ್ತು ಬಾಬು ಅವರ ವಸಂತನಗರದ ರುಕ್ಸಾನಾ ಪ್ಯಾಲೇಸ್ ನಿವಾಸ, ಉಮ್ರಾ ಡೆವಲಪರ್ಸ್ ಕಚೇರಿ, ಹಾಗೂ ರಿಯಲ್ ಎಸ್ಟೇಟ್ ಕಚೇರಿಗಳ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಆದಾಯದ ಮೂಲಗಳು, ವ್ಯವಹಾರದ ಮೌಲ್ಯ, ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.