ಹನಿಟ್ರ್ಯಾಪ್‌ಗೆ ಬಿದ್ದ ವೈದ್ಯ; 1.16 ಕೋಟಿ ರೂಪಾಯಿ ಸುಲಿಗೆ..!
ಬೆಂಗಳೂರು; ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿ ಕಲಬುರಗಿ ಜಿಲ್ಲೆಯ ಆಳಂದದ ವೈದ್ಯರೊಬ್ಬರು 1.16 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ವೈದ್ಯರು ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೋಸದ ಜಾಲಕ್ಕೆ ಸಿಲುಕಿ ಮೋಸಹೋದ ವೈದ್ಯರ ಹೆಸರು ಶಂಕರ್. ಶಂಕರ್ ಅವರು ತಮ್ಮ ಮಗನನ್ನು ಎಂಬಿಬಿಎಸ್ ಓದಿಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಪರಿಚಯಸ್ಥನಾದ ನಾಗರಾಜ್ ಎಂಬಾತ, ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿದ್ದ. 2021ರ ಫೆಬ್ರವರಿಯಲ್ಲಿ ಹಂತ ಹಂತವಾಗಿ 66 ಲಕ್ಷ ರೂಪಾಯಿಯನ್ನು ವೈದ್ಯ ಶಂಕರ್ ಬಳಿಯಿಂದ ಪಡೆದಿದ್ದ. ಆದ್ರೆ ಮಗನಿಗೆ ಸೀಟು ಕೊಡಿಸದೇ ಯಾಮಾರಿಸಿದ್ದ. ಹಣ ವಾಪಸ್ ನೀಡುವಂತೆ ವೈದ್ಯ ಶಂಕರ್ ಅವರನ್ನು ಒತ್ತಾಯಿಸಿದಾಗ, ಆರೋಪಿಗಳು ಅವರನ್ನು ಹನಿಟ್ರ್ಯಾಪ್‌ಗೆ ಕೆಡವಿ ಮತ್ತಷ್ಟು ಹಣ ವಸೂಲಿ ಮಾಡಿದ್ದಾರ
ಆರೋಪಿ ನಾಗರಾಜ್ ನಾಗರಾಜ್ ಹಣ ವಾಪಸ್ ಕೊಡೋದಾಗಿ ಹೇಳಿ , ವೈದ್ಯ ಶಂಕರ್ ಅವರನ್ನು 2022ರ ಜನವರಿಯಲ್ಲಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ. ಇನ್ನೊಬ್ಬ ಆರೋಪಿ ಮಧುಗೆ ಶಂಕರ್‌ರನ್ನು ಪರಿಚಯ ಮಾಡಿಸಿದ್ದ. ನಂತರ, ವೈದ್ಯನಿಗೆ ಉಳಿದುಕೊಳ್ಳಲು ಮೆಜೆಸ್ಟಿಕ್‌ನಲ್ಲಿರುವ ಯು.ಟಿ ವಸತಿಗೃಹದಲ್ಲಿ ಕೊಠಡಿ ಮಾಡಿಕೊಡಲಾಗಿತ್ತು. ನಾಗರಾಜ್ ಹಾಗೂ ವೈದ್ಯ ಶಂಕರ್ ಮಾತ್ರ ಕೊಠಡಿಯಲ್ಲಿದ್ದರು. ನಸುಕಿನ ಸಮಯದಲ್ಲಿ ಇಬ್ಬರು ಯುವತಿಯರು ಏಕಾಏಕಿ ಕೊಠಡಿಗೆ ಬಂದು ಶಂಕರ್ ಅಕ್ಕ–ಪಕ್ಕದಲ್ಲಿ ಕುಳಿತಿದ್ದರು. ಅದೇ ಸಮಯಕ್ಕೆ ಪೊಲೀಸರ ಸೋಗಿನಲ್ಲಿ ಮೂವರು ಕೊಠಡಿಗೆ ಬಂದಿದ್ದರು. ವೇಶ್ಯಾವಾಟಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ವಸತಿಗೃಹದ ಮೇಲೆ ದಾಳಿ ಮಾಡಿರುವುದಾಗಿ ಹೇಳಿದ್ದರು. ವೈದ್ಯ ಹಾಗೂ ಯುವತಿಯರ ಫೋಟೊ ಕ್ಲಿಕ್ಕಿಸಿಕೊಂಡಿದ್ದರು.
ವೇಶ್ಯಾವಾಟಿಕೆ ಆರೋಪದಡಿ ಬಂಧಿಸಲಾಗುವುದೆಂದು ಶಂಕರ್ ಅವರನ್ನು ಆರೋಪಿಗಳು ಹೆದರಿಸಿ, ಅವರ ಬಳಿ ಇದ್ದ ಚಿನ್ನಾಭರಣ ಹಾಗೂ 35 ಸಾವಿರ ರೂಪಾಯಿ ನಗದು ಕಿತ್ತುಕೊಂಡಿದ್ದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡಿ, 70 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಮರ್ಯಾದೆಗೆ ಹೆದರಿದ್ದ ವೈದ್ಯ, ಊರಿಗೆ ಹೋಗಿ ಮನೆ ಅಡವಿಟ್ಟು 50 ಲಕ್ಷ ರೂಪಾಯಿ ಹೊಂದಿಸಿಕೊಟ್ಟಿದ್ದರು.
ಆರೋಪಿಗಳು ಇಷ್ಟಕ್ಕೆ ಸುಮ್ಮನಾಗದೇ ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ವೈದ್ಯರು ಹಣ ಇಲ್ಲ ಎಂದಾಗಿ, ಯುವತಿಯರನ್ನು ಅವರ ಊರಿಗೆ ಕರೆದುಕೊಂಡು ಹೋಗಿ ಗಲಾಟೆ ಮಾಡಿಸಿದ್ದರು. ಇದಾದ ಮೇಲೆ ವೈದ್ಯ ಶಂಕರ್ ಧೈರ್ಯ ಮಾಡಿ, ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು.