BengaluruPolitics

ರಾಜ್ಯ ನಾಯಕರಿಗೆ ಮಣೆ ಹಾಕದ ಕಾಂಗ್ರೆಸ್‌ ಹೈಕಮಾಂಡ್‌; ಉಭಯ ನಾಯಕರಿಗೂ ಅಸಮಾಧಾನ

ಬೆಂಗಳೂರು; ಕಾಂಗ್ರೆಸ್‌ ಹೈಕಮಾಂಡ್‌ ಕಳೆದ ರಾತ್ರಿಯೇ ಪರಿಷತ್‌ಗೆ ಟಿಕೆಟ್‌ ಘೋಷಣೆ ಮಾಡಿದೆ. ಹೈಕಮಾಂಡ್‌ ಘೋಷಣೆ ಮಾಡಿರುವ ಎರಡೂ ಹೆಸರುಗಳು ರಾಜ್ಯ ನಾಯಕರಿಗೆ ಅಚ್ಚರಿ ತರಿಸಿವೆ. ಇದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರಿಗೂ ನಿರಾಸೆ ಮೂಡಿಸಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಇಬ್ಬರು ತಮ್ಮ ಬೆಂಬಲಿಗರಿಗೆ ಟಿಕೆಟ್‌ ಕೊಡಿಸಲು ಕಸರತ್ತು ನಡೆಸಿದ್ದರು. ಆದ್ರೆ ಹೈಕಮಾಂಡ್‌ ಇಬ್ಬರ ಶಿಫಾರಸುಗಳನ್ನೂ ಬಿಟ್ಟು ಬೇರೆಯವರಿಗೆ ಟಿಕೆಟ್‌ ಘೋಷಣೆ ಮಾಡಿದೆ. 

ತಮ್ಮದೇ ಲೆಕ್ಕಚಾರದಡಿ ಟಿಕೆಟ್‌ ಘೋಷಿಸಿರುವ ಕಾಂಗ್ರೆಸ್‌ ವರಿಷ್ಠರು ಪಕ್ಷನಿಷ್ಠರಿಗೆ ಮನ್ನಣೆಯೇ ಹೊರತು ಗುಂಪುಗಾರಿಕೆಗೆ ಅವಕಾಶ ಇಲ್ಲ ಎಂಬ ಸಂದೇಶ ರವಾನಿಸಿದಂತೆ ಕಾಣುತ್ತಿದೆ. ಇತ್ತೀಚೆಗೆ ಪರಿಷತ್‌ನಿಂದ ಕಾಂಗ್ರೆಸ್‌ನ ಮೂವರು ನಿವೃತ್ತಿಯಾಗಿದ್ದರು. ಕೊಡವ ಸಮುದಾಯದ ವೀಣಾ ಅಚ್ಚಯ್ಯ, ಲಿಂಗಾಯತ ಸಮುದಾಯದ ಅಲ್ಲಂ ವೀರಭದ್ರಪ್ಪ ಹಾಗೂ ದಲಿತ ಎಡಗೈ ಸಮುದಾಯದ ಆರ್‌.ಬಿ.ತಿಮ್ಮಪ್ಪ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿಲ್ಲ. ಜೊತೆಗೆ ಈ ಮೂರು ಸಮುದಾಯಗಳಿಗೂ ಕಾಂಗ್ರೆಸ್‌ ವರಿಷ್ಠರು ಮನ್ನಣೆ ಕೊಟ್ಟಿಲ್ಲ. ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್‌ ಜಬ್ಬಾರ್‌ ಹಾಗೂ ಕೆಪಿಸಿಸಿ ವಕ್ತಾರ, ಹಿಂದುಳಿದ ಸಮುದಾಯದ ನಾಗರಾಜ್‌ ಯಾದವ್‌ಗೆ ಪಕ್ಷ ಟಿಕೆಟ್‌ ನೀಡಿದೆ.

ಕಾಂಗ್ರೆಸ್‌ನಲ್ಲಿ ಹಲವು ಮಂದಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಡಿ.ಕೆ.ಶಿವಕುಮಾರ್‌ ಬೆಂಬಲಿಗರು ಹಾಗೂ ಸಿದ್ದರಾಮಯ್ಯ ಬೆಂಬಲಿಗರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದರು. ಆದ್ರೆ ವರಿಷ್ಠರು ಇಬ್ಬರಿಗೂ ಬೇಡ ಎಂದು ಬೇರೆಯವರಿಗೆ ಟಿಕೆಟ್‌ ಘೋಷಿಸಿದೆ. ಇದರಿಂದ ಹಲವು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.

Share Post