Districts

ಪಿಎಸ್‌ಐ ನೇಮಕಾತಿಗೆ ಮರುಪರೀಕ್ಷೆ ಅನಿವಾರ್ಯ; ಗೃಹ ಸಚಿವ ಆರಗ

ರಾಮನಗರ; ಪಿಎಸ್‌ಐ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಬಯಲಾಗಿದೆ. ಈ ಹಿನ್ನೆಲೆಯಲ್ಲಿ ನೇಮಕಾತಿ ಪರೀಕ್ಷೆಯನ್ನು ಪುನಃ ಮಾಡಬೇಕಾದುದು ಅನಿವಾರ್ಯವಾಗಿದೆ. ಕಷ್ಟ ಪಟ್ಟು ಪರೀಕ್ಷೆ ಬರೆದಿರುವವರಿಗೆ ನ್ಯಾಯ ದೊರಕಿಸುವಲ್ಲಿ ನಾವು ಅಸಹಾಯಕರಾಗಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ರಾಮನಗದಲ್ಲಿ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು, ಪರೀಕ್ಷಾರ್ಥಿಗಳು ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಆದ್ರೆ, ಕೇವಲ‌ ಒಂದು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದ್ದರೆ ಆ ಕೇಂದ್ರಕ್ಕೆ ಸಂಬಂಧಿಸಿ ಮಾತ್ರ‌ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಇಲಾಖೆಯ ಕೇಂದ್ರ ಕಚೇರಿಯಲ್ಲಿದ್ದ ಒಎಂಆರ್ ಪ್ರತಿಗಳನ್ನೇ ತಿದ್ದಲಾಗಿದೆ. ಬ್ಲೂಟೂತ್ ಬಳಸಿ ಅಕ್ರಮ ಎಸಗಲಾಗಿದೆ. ಹೀಗಾಗಿ ಮರು ಪರೀಕ್ಷೆ ಅನಿವಾರ್ಯ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಕೂಡಾ ನೇಮಕಾತಿ ಪರೀಕ್ಷೆಗಳಲ್ಲಿ ಹಲವು ಅಕ್ರಮಗಳು ನಡೆದಿದ್ದವು. ಆದ್ರೆ ಅಂದಿನ ಸರ್ಕಾರಗಳು ಕ್ರಮ ಕೈಗೊಂಡಿದ್ದಾರೆ. ಆದ್ರೆ, ಈ ಬಾರಿ ಇದನ್ನು ಸುಮ್ಮನೆ ಬಿಡುವುದಕ್ಕೆ ಸಾಧ್ಯವಿಲ್ಲ. ಇಂತಹ ಅಕ್ರಮಗಳಿಗೆ ಅಂತ್ಯಹಾಡಲೇಬೇಕಿದೆ. ಹೀಗಾಗಿಯೇ ನಾವು ಅಕ್ರಮದಲ್ಲಿ ಭಾಗಿಯಾದವರನ್ನು ಮುಲಾಜಿಲ್ಲದೆ ಬಂಧಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

Share Post