ನವಜೋತ್ ಸಿಧುಗೆ ಜೈಲು ಶಿಕ್ಷೆ; ಏನಿದು ಪ್ರಕರಣ..? ಅಂದು ಏನಾಗಿತ್ತು..?
ನವದೆಹಲಿ: ಅದು 1988 ಡಿಸೆಂಬರ್ 27. ಪಂಜಾಬ್‌ನ ಪಟಿಯಾಲದಲ್ಲಿ ಕಾರು ಪಾರ್ಕಿಂಗ್ ವಿಚಾರಕ್ಕೆ ನಡೆದ ಜಗಳವದು. ಅಂದು ನವಜೋತ್ ಸಿಧು ಹಾಗೂ ಅವರ ಸ್ನೇಹಿತ ರೂಪಿಂದರ್ ಸಿಂಗ್ ತಮ್ಮ ಕಾರು ಪಾರ್ಕ್ ಮಾಡುವಾಗ ಜಗಳ ನಡೆದಿತ್ತು. ಗುರ್ನಾಮ್ ಸಿಂಗ್ ಎಂಬುವವರ ಜೊತೆ ಸಿಧು ಹಾಗೂ ಅವರ ಸ್ನೇಹಿತ ಪಾರ್ಕಿಂಗ್ ವಿಚಾರಕ್ಕೆ ಜಗಳಕ್ಕಿಳಿದಿದ್ದರು.
ಈ ವೇಳೆ ಪಿತ್ತ ನೆತ್ತಿಗೇರಿದಂತೆ ವರ್ತಿಸಿದ ನವಜೋತ್ ಸಿಂಗ್ ಸಿಧು ಹಾಗೂ ಅವರ ಸ್ನೇಹಿತ ರೂಪಿಂದರ್ ಸಿಂಗ್, ಕಾರಿನಲ್ಲಿದ್ದ ಗುರ್ನಾಮ್ ಸಿಂಗ್ ಅವರನ್ನು ಹೊರಗೆಳೆದು ಹಲ್ಲೆ ಮಾಡಿದ್ದರು. ತೀವ್ರವಾಗಿ ಹಲ್ಲೆಗೊಳಗಾಗಿದ್ದ ಗುರ್ನಾಮ್ ಸಿಂಗ್‌ರನ್ನು ಆಸ್ಪತ್ರೆ ಸೇರಿಸಲಾಗಿತ್ತು. ಆದ್ರೆ ತೀವ್ರವಾಗಿ ಹಲ್ಲೆಗೊಳಗಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿತ್ತು. ಹೀಗಾಗಿ ಚಿಕಿತ್ಸೆ ಫಲಕಾರಿಯಾದೆ ಗುರ್ನಾಮ್ ಸಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಹೀಗಾಗಿ ಸಿಧು ಹಾಗೂ ಅವರ ಸ್ನೇಹಿತನ ವಿರುದ್ಧ ಗುರ್ನಾಮ್ ಸಿಂಗ್ ಕುಟುಂಬದವರು ಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘವಾಗಿ ವಿಚಾರಣೆ ನಡಸಿದ್ದ ಪಂಜಾಬ್, ಹರಿಯಾಣ ಹೈಕೋರ್ಟ್, 2018 ಮೇನಲ್ಲಿ ಸಿದ್ದು ಅಪರಾಧಿ ಎಂದು ತೀರ್ಪು ನೀಡಿತ್ತು. ಅಷ್ಟೇ ಅಲ್ಲ, ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಆದ್ರೆ ಈ ತೀರ್ಪನ್ನು ಪ್ರಶ್ನಿಸಿ ಸಿಧು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಜೈಲು ಶಿಕ್ಷೆಯನ್ನು ರದ್ದುಗೊಳಿಸಿ ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿತ್ತು.
ಆದರೆ ಸಿದ್ದು ವಿರುದ್ಧ ಹೋರಾಟ ಮಾತ್ರ ಗುರ್ನಾಮ್ ಸಿಂಗ್ ಕುಟುಂಬದವರು ಬಿಡಲಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸುತ್ತಿದ್ದ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ತಮ್ಮದೇ ತೀರ್ಪನ್ನು ಪುನರ್ ಪರಿಶೀಲಿಸಿ, ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.