ಜ್ಞಾನವಾಪಿ ಮಸೀದಿ ಸಮೀಕ್ಷೆ ಮುಕ್ತಾಯ; ಬಾವಿಯಲ್ಲಿ ಶಿವಲಿಂಗ ಪತ್ತೆ – ವಕೀಲ
ವಾರಣಾಸಿ; ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೋಗ್ರಫಿ ಸಮೀಕ್ಷೆ ಇವತ್ತಿಗೆ ಪೂರ್ಣಗೊಂಡಿದೆ. ಈ ನಡುವೆ ಹಿಂದೂಪರ ವಕೀಲರೊಬ್ಬರು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಮಸೀದಿ ಆವರಣದಲ್ಲಿರುವ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದೆ. ಅದಕ್ಕೆ ರಕ್ಷಣೆ ಸಿಗಬೇಕು. ಅದಕ್ಕಾಗಿ ಸಿವಿಲ್ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಹಿಂದೂ ಪರ ವಕೀಲ ಮದನ್ ಮೋಹನ್ ಯಾದವ್ ಹಾಗೂ ವಿಷ್ಣು ಜೈನ್ ಹೇಳಿದ್ದಾರೆ.
ಜ್ಞಾನವಾಪಿ ಮಸೀದಿಯೊಳಗಿನ ಬಾವಿಯಲ್ಲಿ ಶಿವಲಿಂಗ ಕಾಣಿಸಿದೆ. ಅದು 12 ಅಡಿ ಎತ್ತರ, ಎಂಟು ಇಂಚು ವ್ಯಾಸವನ್ನು ಹೊಂದಿದೆ. ಇದನ್ನು ರಕ್ಷಣೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹಿಂದೂ ಪರ ವಕೀಲರು ಹೇಳಿದ್ದಾರೆ. ಇಂದು ಸಮೀಕ್ಷೆ ವೇಳೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ವಕೀಲರ ಆಯುಕ್ತರು ಮಂಗಳವಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ.
ವಕೀಲರಾದ ಹರಿಶಂಕರ್ ಜೈನ್ ಮತ್ತು ವಿಷ್ಣು ಜೈನ್ ಅವರ ಪ್ರಕಾರ, ದೇವಸ್ಥಾನದ ಭಾಗವಾಗಿದ್ದ ಮಸೀದಿಯ ಪ್ರದೇಶಗಳ ಸಮೀಕ್ಷೆಯನ್ನು ಭಾನುವಾರ ನಡೆಸಲಾಯಿತು. ಜ್ಞಾನವಾಪಿ ಸಂಕೀರ್ಣದ ಪಶ್ಚಿಮ ಗೋಡೆಯ ಮೇಲೆ ಹಿಂದೂ ದೇವಾಲಯದ ಅವಶೇಷಗಳು ಗೋಚರಿಸುತ್ತವೆ. ದೊಡ್ಡ ಪುರಾವೆಯಾಗಿರುವ ಚಿತ್ರಗಳನ್ನು ಸಮೀಕ್ಷೆ ಮಾಡಲಾಗುತ್ತದೆ. ಇಂದು ನಾಲ್ಕನೇ ಕೊಠಡಿ ಬೀಗ ತೆರೆದು ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.