Science

ಚಂದ್ರನಿಂದ ತಂದ ಮಣ್ಣಿನಲ್ಲಿ ಗಿಡ ಬೆಳೆಸಿದ ವಿಜ್ಞಾನಿಗಳು..!

      ಚಂದ್ರನ ಮೇಲೆ ಮನುಷ್ಯರು ಜೀವನ ನಡೆಸೋದಕ್ಕೆ ಸಾಧ್ಯ ಎಂಬುದಕ್ಕೆ ಮತ್ತೊಂದು ಬಲವಾದ ಆಧಾರ ಸಿಕ್ಕಿದೆ. ಚಂದ್ರನ ಮೇಲಿಂದ ತಂದ ಮಣ್ಣಿನಲ್ಲಿ ಗಿಡವನ್ನು ಬೆಳೆಸುವುದರ ಮೂಲಕ, ಚಂದ್ರನ ಮೇಲೆ ಮನುಷ್ಯ ಜೀವಿಸುವ ವಾತಾವರಣ ಸೃಷ್ಟಿಸಬಹುದು ಎಂಬುದನ್ನು ಸಾಬೀತುಪಡಿಸುವತ್ತ ಹೊರಟಿದ್ದಾರೆ. ಚಂದ್ರನ ಮೇಲಿಂದ ತಂದ ಮಣ್ಣಿನಲ್ಲಿ ಬೀಜವೊಂದನ್ನು ಹಾಕಿದ್ದು, ಅದು ಮೊಳಕೆಯೊಡೆದಿದೆ. ಅಷ್ಟೇ ಅಲ್ಲ, ಆ ಗಿಡ ಚೆನ್ನಾಗಿ ಬೆಳೆಯುತ್ತಿದೆ. ಇದು ತಮಗೆ ಸಿಕ್ಕ ದೊಡ್ಡ ವಿಜಯ ಎಂದು ಸಂಶೋಧಕರು ಭಾವಿಸುತ್ತಿದ್ದಾರೆ. ಚಂದ್ರನ ಮೇಲೆ ಹೆಚ್ಚು ಹೊತ್ತು ಇರುವುದಕ್ಕೆ ಇದು ತುಂಬಾ ಅನೂಲಕರ ಎಂದು ಹೇಳಲಾಗುತ್ತಿದೆ.

   1969-1972ರ ಮಧ್ಯದಲ್ಲಿ ಚಂದ್ರಯಾನ ಮಾಡಿದ ಅಪೋಲೋ ಮಿಷನ್‌ ಭಾಗವಾಗಿ ಚಂದ್ರನಿಂದ ಮಣ್ಣನ್ನು ಶೇಖರಿಸಿ ತರಲಾಗಿತ್ತು. ಆ ಮಣ್ಣಿನಲ್ಲಿ ಕೆಲ ಭಾಗವನ್ನು ತೆಗೆದುಕೊಂಡು ಸಂಶೋಧಕರು ಅದ್ರಲ್ಲಿ ಬೀಜಗಳನ್ನು ನೆಟ್ಟಿದ್ದರು. ಅದ್ರಿಂದ ಭೂಮಿಯ ಮೇಲಿನಂತೆ ಕೇವಲ ಎರಡು ದಿನಗಳಲ್ಲೇ ಮೊಳಕೆ ಬಂದಿದೆ. ಇದನ್ನು ನೋಡಿ ಸಂಶೋಧಕರೇ ಅಚ್ಚರಿಗೊಳಗಾಗಿದ್ದಾರೆ. ಜೊತೆಗೆ ಅವರ ಖುಷಿಯೂ ಇಮ್ಮಡಿಯಾಗಿದೆ.

   ನಾವು ಎಷ್ಟು ಅಚ್ಚರಿ ಹಾಗೂ ಖುಷಿ ಪಟ್ಟಿದ್ದೇವೋ ವರ್ಣಿಸೋದಕ್ಕೆ ಸಾಧ್ಯವೇ ಇಲ್ಲ ಎಂದು ಸಂಶೋಧಕರಲ್ಲಿ ಒಬ್ಬರಾದ ಅನಾ ಲಿಸಾ ಪಾಲ್‌ ಹೇಳಿದ್ದಾರೆ. ಯೂನಿವರ್ಸಿಟಿ ಆಫ್‌ ಪ್ಲೋರಿಡಾದಲ್ಲಿ ಪ್ರೊಫೆಸರ್‌ ಆಗಿ ಕೆಲಸ ಮಾಡುತ್ತಿರುವ ಆಕೆ ಈ ಸಂಶೋಧನೆಯ ಸಾರಥ್ಯ ವಹಿಸಿರುವವರಲ್ಲಿ ಒಬ್ಬರಾಗಿದ್ದಾರೆ.

“ಚಂದ್ರನ ಮಣ್ಣಿನ ಮಾದರಿಯಲ್ಲಿ ಬೆಳೆದ, ನಿಯಂತ್ರಿತ ಪರಿಸ್ಥಿತಿಗಳಲ್ಲಿ ಬೆಳೆದ ಸಸ್ಯಗಳು ಆರು ದಿನಗಳವರೆಗೆ ಒಂದೇ ರೀತಿ ಇದ್ದವು. ಆರು ದಿನಗಳ ನಂತರ ಎರಡರ ನಡುವೆ ಭಿನ್ನತೆ ಕಾಣಿಸಿಕೊಂಡಿತು. ಚಂದ್ರನ ಮಣ್ಣಿನಲ್ಲಿ ಬೆಳೆದ ಸಸ್ಯಗಳು ಒತ್ತಡದಲ್ಲಿದ್ದಂತೆ ಕಾಣಿಸಿಕೊಂಡವು. ಅವುಗಳ ಬೆಳವಣಿಗೆ ನಿಧಾನಗೊಂಡಿತ್ತು. ಆದರೂ ಕೂಡಾ ಈ ನಮ್ಮ ಸಂಶೋಧನೆ ಯಶಸ್ಸಿನ ಹಾದಿಯಲ್ಲಿರುವುದಂತೂ ಸತ್ಯ: ಎಂದು ಸಂಶೋಧಕಿ ಅನಾ ಲಿಸಾ ಹೇಳಿದ್ದಾರೆ.

“ಭವಿಷ್ಯದಲ್ಲಿ, ಬ್ರಹ್ಮಾಂಡದ ದೂರದ ಭಾಗಗಳಲ್ಲಿ ವಾಸಿಸುವ ಗಗನಯಾತ್ರಿಗಳಿಗೆ ಸಂಶೋಧನೆ ನಡೆಸಲು, ಚಂದ್ರ ಮತ್ತು ಮಂಗಳನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಆಹಾರ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ. ಈ ಸಂಶೋಧನೆಯು ನಾಸಾದ ದೀರ್ಘಾವಧಿಯ ಕಾಸ್ಮಿಕ್ ಮಿಷನ್‌ಗೆ ನಿರ್ಣಾಯಕವಾಗಿದೆ” ಎಂದು ನಾಸಾ ಮುಖ್ಯಸ್ಥ ಬಿಲ್ ನೆಲ್ಸನ್ ಹೇಳಿದ್ದಾರೆ.

ಭೂಮಿಯ ಮೇಲೆ ಆಹಾರದ ಕೊರತೆಯಿರುವ ಪ್ರದೇಶಗಳಲ್ಲಿಯೂ ಸಹ ಪ್ರತಿಕೂಲ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಸಸ್ಯಗಳ ಅಭಿವೃದ್ಧಿಗೆ ಸಂಶೋಧನೆಯು ಇತ್ತೀಚಿನ ಕೃಷಿ ಆವಿಷ್ಕಾರಗಳಿಗೆ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು. ಆದಾಗ್ಯೂ.. ಹೆಚ್ಚು ಚಂದ್ರನ ಮಣ್ಣಿನ ಕೊರತೆಯು ವಿಜ್ಞಾನಿಗಳಿಗೆ ಚಂದ್ರನ ಮಣ್ಣಿನಲ್ಲಿ ಸಸ್ಯ ಕೃಷಿಯ ಬಗ್ಗೆ ಹೆಚ್ಚು ವ್ಯಾಪಕವಾದ ಪ್ರಯೋಗಗಳನ್ನು ನಡೆಸಲು ಸವಾಲಾಗಿದೆ. ನಾಸಾ ಗಗನಯಾತ್ರಿಗಳು 1969 ರಿಂದ ಮೂರು ವರ್ಷಗಳ ಅವಧಿಯಲ್ಲಿ ಚಂದ್ರನಿಂದ 382 ಕೆಜಿ ಮಣ್ಣು, ಕಲ್ಲುಗಳು, ಉಂಡೆಗಳು, ಮರಳು ಮತ್ತು ಧೂಳಿನ ಮಾದರಿಗಳನ್ನು ಭೂಮಿಗೆ ತಂದಿದ್ದರು.

ದಶಕಗಳಿಂದ ಮರೆಯಾಗಿದ್ದ ಈ ಮಾದರಿಗಳಿಂದ ಫ್ಲೋರಿಡಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಪ್ರತಿ ಗಿಡಕ್ಕೆ ಕೇವಲ ಒಂದು ಕಿಲೋಗ್ರಾಂ ಮಣ್ಣನ್ನು ಸಂಶೋಧನೆಗೆ ಒದಗಿಸಿದ್ದಾರೆ. 1972 ರ ನಂತರ ಮೊದಲ ಬಾರಿಗೆ, 2025 ರಲ್ಲಿ ಚಂದ್ರನ ಮೇಲೆ ಮಾನವರನ್ನು ಕಳುಹಿಸಲು ನಾಸಾ ಸಿದ್ಧತೆ ನಡೆಸಿದೆ.

Share Post