EconomyNational

1991ರಲ್ಲಿ ಭಾರತಕ್ಕೂ ಶ್ರೀಲಂಕಾ ಸ್ಥಿತಿ ಬಂದಿತ್ತಾ..?; ಪಿವಿಎನ್‌ ಸರ್ಕಾರ ಗೆದ್ದಿದ್ದು ಹೇಗೆ..?

ಬೆಂಗಳೂರು: ಶ್ರೀಲಂಕಾ ಈಗ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಸರ್ಕಾರ ನಡೆಸಲು, ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸುತ್ತಿದ್ದಾರೆ. ಶ್ರೀಲಂಕಾ ಈಗ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಕೆಲವರು 1991 ರಲ್ಲಿ ಭಾರತದಲ್ಲಿನ ಆರ್ಥಿಕ ಬಿಕ್ಕಟ್ಟಿಗೆ ಹೋಲಿಸುತ್ತಿದ್ದಾರೆ. ಆಗ ಭಾರತದಲ್ಲಿ ವಿದೇಶಿ ವಿನಿಮಯ ಸಂಗ್ರಹ ಬಹುತೇಕ ಖಾಲಿಯಾಗಿತ್ತು. ಕೇವಲ ಒಂದು ಬಿಲಿಯನ್ ಡಾಲರ್ ಮೀಸಲು ಮಾತ್ರ ಉಳಿದಿತ್ತು. ಅದೂ ಕೂಡಾ ತೈಲ ಮತ್ತು ಆಹಾರದ ಬಿಲ್‌ 20 ದಿನಗಳವರೆಗೆ ಪಾವತಿಸಲು ಮಾತ್ರ ಸಾಧ್ಯವಾಗುತ್ತಿತ್ತು.

ಆಗ ಜಗತ್ತಿನ ಇತರ ದೇಶಗಳೊಂದಿಗೆ ರಫ್ತು ಮತ್ತು ಆಮದು ಮಾಡಿಕೊಳ್ಳಲು ಬೇಕಾದ ವಿದೇಶಿ ವಿನಿಮಯವೂ ಭಾರತದ ಬಳಿ ಇರಲಿಲ್ಲ. ಭಾರತದ ಬಾಹ್ಯ ಸಾಲ 72 ಶತಕೋಟಿ ಡಾಲರ್ (ಅಂದಾಜು 5.48 ಲಕ್ಷ ಕೋಟಿ‌ ರೂಪಾಯಿ) ತಲುಪಿತ್ತು. ಬ್ರೆಜಿಲ್ ಮತ್ತು ಮೆಕ್ಸಿಕೋ ನಂತರ ಭಾರತ ವಿಶ್ವದ ಮೂರನೇ ಅತಿ ಹೆಚ್ಚು ಸಾಲ ಹೊಂದಿರುವ ದೇಶವಾಗಿತ್ತು. ದೇಶದ ಆರ್ಥಿಕತೆ ಮತ್ತು ಸರ್ಕಾರದ ಮೇಲಿನ ಸಾರ್ವಜನಿಕ ವಿಶ್ವಾಸ ಕುಸಿಯುತ್ತಿತ್ತು. ಹಣದುಬ್ಬರ, ಆದಾಯ ಇಳಿಕೆ ಮತ್ತು ಚಾಲ್ತಿ ಖಾತೆ ಕೊರತೆ ದ್ವಿಗುಣಗೊಂಡಿತ್ತು.

ಅಂತಾರಾಷ್ಟ್ರೀಯ ಕಾರಣಗಳು

ಆ ಸಮಯದಲ್ಲಿ ಅಂತಾರಾಷ್ಟ್ರೀಯವಾಗಿ ನಡೆದ ಕೆಲವು ಘಟನೆಗಳು 1990ರ ದಶಕದಲ್ಲಿ ಭಾರತದ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾದವು. ಗಲ್ಫ್ ಯುದ್ಧ 1990 ರಲ್ಲಿ ಪ್ರಾರಂಭವಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಯಿತು. ಅದರ ಪ್ರಭಾವ ನೇರವಾಗಿ ಭಾರತದ ಮೇಲೆ ಬಿತ್ತು. ಪೆಟ್ರೋಲಿಯಂ ಆಮದು ಮೊತ್ತ 1990-91 ರಲ್ಲಿ  2 ಶತಕೋಟಿ ಡಾಲರ್‌ನಿಂದ  5.7 ಶತಕೋಟಿ ಡಾಲರ್‌ಗೆ ಏರಿತು.

ಭಾರತದ ರಫ್ತು-ಆಮದು ಸಮತೋಲನ ಅಸಮತೋಲನಗೊಂಡಿತ್ತು. ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡುವ ಭಾರತೀಯರ ಗಳಿಕೆಯ ಮೇಲೂ ಇದು ಪರಿಣಾಮ ಬೀರಿತ್ತು. ಅವರಿಂದ ಭಾರತಕ್ಕೆ ಬರುವ ಹಣದ ಮೇಲೂ ವ್ಯತಿರಿಕ್ತ ಪರಿಣಾಮವಾಗಿತ್ತು. ಆ ಎರಡು ವರ್ಷಗಳಲ್ಲಿ ದೇಶದಲ್ಲಿ ರಾಜಕೀಯ ಅಸ್ಥಿರತೆ ಕೂಡಾ ಹೆಚ್ಚಾಗಿತ್ತು.

1989ರ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗುವುದಿಲ್ಲ. ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸಮ್ಮಿಶ್ರ ಸರ್ಕಾರ ರಚಿಸಲು ನಿರಾಕರಿಸುತ್ತದೆ. ಹೀಗಾಗಿ ಎರಡನೇ ಅತಿ ದೊಡ್ಡ ಪಕ್ಷವಾದ ಜನತಾದಳ ವಿ.ಪಿ.ಸಿಂಗ್ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುತ್ತದೆ. ಆದರೆ, ಈ ಸಮ್ಮಿಶ್ರ ಸರ್ಕಾರ ಜಾತಿ ಮತ್ತು ಧರ್ಮದ ಸಂಘರ್ಷದಲ್ಲಿ ಮುಳುಗಿಬಿಡುತ್ತದೆ. ದೇಶಾದ್ಯಂತ ಗಲಭೆಗಳು ಭುಗಿಲೇಳುತ್ತವೆ. ಇದರಿಂದಾಗಿ ಡಿಸೆಂಬರ್ 1990 ರಲ್ಲಿ ಪ್ರಧಾನ ಮಂತ್ರಿ ವಿ.ಪಿ. ಸಿಂಗ್ ರಾಜೀನಾಮೆ ನೀಡಬೇಕಾಗಿ ಬರುತ್ತದೆ. ದೇಶದಲ್ಲಿ ಇದೇ ರೀತಿಯ ರಾಜಕೀಯ ಅನಿಶ್ಚಿತತೆಯ ನಡುವೆ ಮೇ 21, 1991 ರಂದು ರಾಜೀವ್ ಗಾಂಧಿ ಅವರ ಹತ್ಯೆ ನಡೆಯುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಭಾರತದ ಆರ್ಥಿಕತೆ ಮತ್ತಷ್ಟು ಕುಸಿಯುತ್ತದೆ. ಅನಿವಾಸಿ ಭಾರತೀಯರು ತಮ್ಮ ಹಣವನ್ನು ಹಿಂಪಡೆಯಲು ಆರಂಭಿಸುತ್ತಾರೆ. ಭಾರತಕ್ಕೆ ರಫ್ತು ಮಾಡಿದವರಿಗೆಲ್ಲಾ ಭಾರತ ಹಣ ನೀಡಿಲ್ಲ ಎಂದು ಭಾವಿಸಿದ್ದರು. ವಸ್ತುಗಳ ಬೆಲೆಗಳು ಗಗನಕ್ಕೇರುತ್ತವೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತದೆ. ಆಮದು ಸ್ಥಗಿತಗೊಳ್ಳುತ್ತದೆ. ಇದರಿಂದಾಗಿ ಸರಕಾರ ವೆಚ್ಚ ಕಡಿತಗೊಳಿಸುತ್ತದೆ. ಇದೇ ವೇಳೆ  ರೂಪಾಯಿ ಮೌಲ್ಯ ಶೇಕಡಾ 20 ರಷ್ಟು ಕುಸಿಯುತ್ತದೆ. ಈ ಕಾರಣದಿಂದಾಗಿ ಬ್ಯಾಂಕ್‌ಗಳು ಬಡ್ಡಿದರ ಹೆಚ್ಚಿಸಿಕೊಳ್ಳುತ್ತವೆ.

ಸರ್ಕಾರದಿಂದ 20 ಟನ್ ಚಿನ್ನ ಒತ್ತೆ

ಐಎಂಎಫ್ ಭಾರತಕ್ಕೆ 1.27 ಬಿಲಿಯನ್ ಡಾಲರ್ ಸಾಲ ನೀಡುತ್ತದೆ. ಆದಾಗ್ಯೂ, ಪರಿಸ್ಥಿತಿಗಳು ಸುಧಾರಿಸುವುದಿಲ್ಲ. ಹೀಗಾಗಿ 1991ರ ಆರ್ಥಿಕ ವರ್ಷದ ಕೊನೆಯಲ್ಲಿ, ಚಂದ್ರಶೇಖರ್ ಸರ್ಕಾರ 20 ಟನ್ ಚಿನ್ನವನ್ನು ಒತ್ತೆ ಇಡಬೇಕಾಗಿ ಬರುತ್ತದೆ.

ಈ ನಡುವೆ 1991ರ ಜೂನ್ 21ರಂದು ಪಿ.ವಿ.ನರಸಿಂಹರಾವ್ ಪ್ರಧಾನಿಯಾಗುತ್ತಾರೆ. ಭಾರತ ತನ್ನ ವಿದೇಶಿ ಸಾಲವನ್ನು ನಿಗದಿತ ಸಮಯದೊಳಗೆ ಮರುಪಾವತಿಸಲು ಸಾಧ್ಯವಾಗುವುದಿಲ್ಲ ಮತ್ತು ತನ್ನನ್ನು ತಾನು ಸುಸ್ತಿದಾರ ಎಂದು ಘೋಷಿಸಿಕೊಳ್ಳುತ್ತದೆ ಎಂದು ಆ ಸಮಯದಲ್ಲಿ ವ್ಯಾಪಕವಾಗಿ ನಂಬಲಾಗಿತ್ತು. ಆದರೆ ಮನಮೋಹನ್ ಸಿಂಗ್ ಅವರನ್ನು ಹಣಕಾಸು ಸಚಿವರನ್ನಾಗಿ ನೇಮಿಸಿದ ಪಿ.ವಿ. ನರಸಿಂಹರಾವ್ ಅವರು ದೇಶದಲ್ಲಿ ಹಲವಾರು ಆರ್ಥಿಕ ಸುಧಾರಣೆಗಳನ್ನು ತರುತ್ತಾರೆ. ಇದರಿಂದಾಗಿ ಭಾರತದ ಆರ್ಥಿಕತೆ ರಚನಾತ್ಮಕ ಬದಲಾವಣೆಗಳೊಂದಿಗೆ ಸುವ್ಯವಸ್ಥಿತ ಸ್ಥಿತಿಗೆ ತಲುಪುತ್ತದೆ.

Share Post