ಸನ್ಯಾಸಿಯಾಗಿ ಬದಲಾದ ಬಿ.ಜೆ.ಪುಟ್ಟಸ್ವಾಮಿ; ಮೇ 15ರಂದು ಗಾಣಿಗರ ಮಠಾಧ್ಯಕ್ಷರಾಗಿ ಪಟ್ಟಾಭಿಷೇಕ
ಬೆಂಗಳೂರು; ಮಾಜಿ ಸಚಿವ ಹಾಗೂ ಯಡಿಯೂರಪ್ಪ ಆಪ್ತ ಬಿ.ಜೆ.ಪುಟ್ಟಸ್ವಾಮಿಯವರು ಸನ್ಯಾಸಿಯಾಗಿ ಬದಲಾಗಿದ್ದಾರೆ. ಐದು ದಶಕಗಳ ರಾಜಕೀಯ ಜೀವನಕ್ಕೆ ಗುಡ್‌ಬೈ ಹೇಳಿರುವ ಅವರು, ಇದೀಗ ಪೂರ್ಣಾನಂದ ಪುರಿ ಸ್ವಾಮೀಜಿಯಾಗಿ ಬದಲಾಗಿದ್ದಾರೆ. ನಿನ್ನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಕೈಲಾಸ ಆಶ್ರಮದಲ್ಲಿ ಅಲ್ಲಿನ ಮಹಾಸಂಸ್ಥಾನದ ಪೀಠಾಧಿಪತಿ ಜಯೇಂದ್ರಪುರಿ ಸ್ವಾಮೀಜಿ ಅವರು ಪುಟ್ಟಸ್ವಾಮಿ ಅವರಿಗೆ ಸನ್ಯಾಸ ದೀಕ್ಷೆ ನೀಡಿದ್ದಾರೆ. ಇದೇ ವೇಳೆ ಅವರಿಗೆ ಪೂರ್ಣಾನಂದ ಪುರಿ ಸ್ವಾಮೀಜಿ ಎಂದು ನಾಮಕರಣ ಮಾಡಲಾಗಿದೆ.
ಬಿ.ಜೆ.ಪುಟ್ಟಸ್ವಾಮಿಯವರು ಗಾಣಿಗ ಸಮುದಾಯಕ್ಕೆ ಸೇರಿದವರು. ಅವರ ಸಮುದಾಯದ ಮಠ ರಾಜ್ಯದಲ್ಲಿ ಇರಲಿಲ್ಲ. ಹೀಗಾಗಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಗಾಣಿಗ ಸಮುದಾಯಕ್ಕೆ ಮಠ ಕಟ್ಟಲು 8 ಎಕರೆ ಜಮೀನು ಮತ್ತು 5 ಕೋಟಿ ರೂಪಾಯಿ ಅನುದಾನ ನೀಡಿದ್ದರು. ಜೊತೆಗೆ ದಾನಿಗಳಿಂದ ಹಣ ಸಂಗ್ರಹಿಸಿ ಗುರು ಪೀಠ, ವಿದ್ಯಾರ್ಥಿ ನಿಲಯ, ಸಮುದಾಯ ಭವನ ನಿರ್ಮಿಸಲಾಗಿದೆ. ಇದಕ್ಕೆ ಮಠಾಧೀಶರನ್ನಾಗಿ ಮಾಡಲು ಹುಡುಕಾಟ ನಡೆಸಿದರೂ ಯಾರೂ ಸಿಕ್ಕಿಲ್ಲ. ಹೀಗಾಗಿ ಬಿ.ಜೆ.ಪುಟ್ಟಸ್ವಾಮಿಯವರೇ ಖಾವಿ ಧರಿಸಲು ತೀರ್ಮಾನಿಸಿ, ಈಗ ಸನ್ಯಾಸ ಧೀಕ್ಷೇ ಸ್ವೀಕರಿಸಿದ್ದಾರೆ
ಈ ತಿಂಗಳ 15ರಂದು ಕೈಲಾಸ ಮಠದ ಜಯೇಂದ್ರಪುರಿ ಸ್ವಾಮೀಜಿಗಳು ನೆಲಮಂಗಲದ ಬಳಿಯ ಮಾದನಾಯಕನಹಳ್ಳಿಯಲ್ಲಿನ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠಕ್ಕೆ ಪ್ರಥಮ ಪೀಠಾಧಿಪತಿಯಾಗಿ ಪೂರ್ಣಾನಂಧಪುರಿ ಸ್ವಾಮೀಜಿಗೆ ಪಟ್ಟಾಭಿಷೇಕ ಮಹೋತ್ಸವ ನೆರವೇರಿಸಿಕೊಡಲಿದ್ದಾರೆ.
ಪಟ್ಟಾಭಿಷೇಕ ಮಹೋತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. 20 ಮಠಾಧೀಶರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.