ಸೆಲ್ಫಿ ಗೀಳು; ಕಾಲು ಜಾರಿ ನದಿಗೆ ಬಿದ್ದು ಗೃಹಿಣಿ ಸಾವು
ಮೈಸೂರು; ಸೆಲ್ಫಿ ಗೀಳಿನಿಂದಾಗಿ ಗೃಹಣಿಯೊಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಶ್ರೀಕ್ಷೇತ್ರ ಸಂಗಮದ ಮುಂಭಾಗದಲ್ಲಿರುವ ಕಪಿಲಾ ನದಿ ದಡದಲ್ಲಿ ಈ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ನಂಜದೇವನಪುರ ಗ್ರಾಮದ ಮಹಿಳೆ ಕವಿತಾ ನದಿ ಪಾಲಾದವರು.
ಪತಿ ಗಿರೀಶ್ ಹಾಗೂ ಪುತ್ರಿ ಜೊತೆ ಕವಿತಾ ಅವರು ಸಂಗಮಕ್ಕೆ ಬಂದಿದ್ದರು. ಶ್ರೀಕ್ಷೇತ್ರ ಸಂಗಮದ ಮುಂಭಾಗದಲ್ಲಿರುವ ಕಪಿಲಾ ನದಿ ದಡದಲ್ಲಿ ಕಾಲು ತೊಳೆಯಲು ಹೋಗಿದ್ದರು. ಇದೇ ವೇಳೆ ತಮ್ಮ ಮೊಬೈಲ್ ಫೋನ್ ಮೂಲಕ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ಕವಿತಾ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ರಕ್ಷಿಸುವ ಪ್ರಯತ್ನ ಮಾಡಿತಾದರೂ, ಅಷ್ಟೊತ್ತಿಗೆ ಅವ್ರ ಪ್ರಾಣಪಕ್ಷಿ ಹಾರಿಹೋಗಿತ್ತು.
ಕವಿತಾರನ್ನ ಕಳೆದುಕೊಂಡ ಪತಿ ಗಿರೀಶ್ ಮತ್ತು ಅವರ ಪುತ್ರಿಯ ಆಕ್ರಂದನ ಮುಗಿಲುಮುಟ್ಟಿದೆ. ಮೃತ ದೇಹವನ್ನು ನದಿಯಿಂದ ಹೊರತೆಗೆದು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

