Districts

ಮಂಡ್ಯದಲ್ಲಿ ಹಣ ಡಬ್ಲಿಂಗ್‌ ದಂಧೆ; 5 ಲಕ್ಷ ರೂ. ಪಂಗನಾಮ

ಮಂಡ್ಯ; ಹಣ ದ್ವಿಗುಣ ಮಾಡಿಕೊಡುತ್ತೇವೆಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ಐದು ಲಕ್ಷ ರೂಪಾಯಿಗೆ ಪಂಗನಾಮ ಹಾಕಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಪುನೀತ್‌ ಹಾಗೂ ಕಿರಣ್‌ ಎಂಬುವವರೇ ಹಣ ಕಳೆದುಕೊಂಡು ಮೋಸಹೋದ ವ್ಯಕ್ತಿಗಳು. ದುಷ್ಕರ್ಮಿಗಳು ಐದು ಲಕ್ಷ ರೂಪಾಯಿ ಕೊಟ್ಟರೆ ನಿಮಗೆ ಅದನ್ನು ಡಬಲ್‌ ಮಾಡಿಕೊಡುತ್ತೇವೆ ಎಂದು ನಂಬಿಸಿದ್ದಾರೆ. ಅದನ್ನು ನಂಬಿದ್ದ ಪುನೀತ್‌ ಹಾಗೂ ಕಿರಣ್‌ ಐದು ಲಕ್ಷ ರೂಪಾಯಿ ಹಣವನ್ನು ಹೊಂದಿಸಿ, ಕಾರಿನಲ್ಲಿ ಬಂದಿದ್ದ ವ್ಯಕ್ತಿಗಳಿಗೆ ನೀಡಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಬ್ಯಾಗ್‌ ಒಂದನ್ನು ನೀಡಿದ್ದು, ಅದ್ರಲ್ಲಿ ಹತ್ತು ಲಕ್ಷ ರೂಪಾಯಿ ಇದೆ. ಆಚೆಗೆ ಹೋಗಿ ಎಣಿಸಿಕೊಳ್ಳಿ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆದ್ರೆ ಬ್ಯಾಗ್‌ ತೆಗೆದು ನೋಡಿದಾಗ ಮೋಸ ಹೋಗಿರುವುದು ಗೊತ್ತಾಗಿದೆ.

 

ಮದ್ದೂರು ತಾಲೂಕಿನ ಉಪ್ಪಿನಕೆರೆ ಗೇಟ್ ಬಳಿ ಈ ಘಟನೆ ನಡೆದಿದೆ. ಉಪ್ಪಿನಕೆರೆ ಗೇಟ್ ಬಳಿಯ ಶ್ರೀಕಬ್ಬಾಳಮ್ಮ ಟೀ ಸ್ಟಾಲ್ ಹತ್ತಿರ ಮಂಗಳವಾರ ಮಧ್ಯಾಹ್ನ ಪುನೀತ್ ಮತ್ತು ಕಿರಣ್ ಬೈಕ್‌ನಲ್ಲಿ ಬಂದಿದ್ದಾರೆ. ಇದೇ ವೇಳೆಗೆ ಕೋಲಾರ ಮೂಲದ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಬಂದಿದ್ದು,  ಹಣ ವಿನಿಮಯ ಮಾಡಿಕೊಳ್ಳಲು ನಾಲ್ವರೂ ಕಾರಿನಲ್ಲಿಯೇ ಕುಳಿತು ವ್ಯವಹಾರ ಕುದುರಿಸಿದ್ದಾರೆ. ಈ ವೇಳೆ ಪುನೀತ್ ಮತ್ತು ಕಿರಣ್ ಅವರಿಂದ 5 ಲಕ್ಷ ರೂ. ಅಸಲಿ ನೋಟುಗಳಿದ್ದ ಬ್ಯಾಗ್ ಅ​ನ್ನು ಆರೋಪಿಗಳು ಪಡೆದುಕೊಂಡಿದ್ದಾರೆ. ಪುನೀತ್‌, ಕಿರಣ್‌ಗೆ ಹತ್ತು ಲಕ್ಷ ರೂಪಾಯಿ ಇದೆ ಎಂದು ಒಂದು ಬ್ಯಾಗ್‌ ಕೊಟ್ಟಿದ್ದಾರೆ. ಆದ್ರೆ ದುಷ್ಕರ್ಮಿಗಳು ಕೊಟ್ಟ ಬ್ಯಾಗ್‌ನ ಕೆಳಭಾಗದಲ್ಲಿ ನೋಟ್ ಬುಕ್‌ಗಳನ್ನು ತುಂಬಿ ಮೇಲುಗಡೆ ಮಾತ್ರ 100, 200, 500 ರೂ. ಮುಖಬೆಲೆಯ ಅಸಲಿ ನೋಟುಗಳನ್ನು ಅಂಟಿಸಿದ್ದಾರೆ. ಇದನ್ನು ನೋಡಿ ಪುನೀತ್‌ ಹಾಗೂ ಕಿರಣ್‌ ಬೆಚ್ಚಿಬಿದ್ದಿದ್ದಾರೆ.

 

ಕಾರು ಮಳವಳ್ಳಿ ಕಡೆ ಹೋಗಿದ್ದನ್ನು ಗಮನಿಸಿದ ಕಿರಣ್‌ ಹಾಗೂ ಪುನೀತ್‌ ಅದನ್ನು ಹಿಂಬಾಲಿಸಿದ್ದಾರೆ. ಆದ್ರೆ ಕಾರು ವೇಗವಾಗಿ ಹೋಗಿದ್ದರಿಂದ ಅದನ್ನು ಚೇಸ್‌ ಮಾಡಲು ಆಗಿಲ್ಲ. ಹೀಗಾಗಿ ಹಣ ಕಳೆದುಕೊಂಡ ಇಬ್ಬರೂ  ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Share Post