ಸೀಬೆಹಣ್ಣಿನ ಆಸೆಗೆ ಪ್ರಾಣವನ್ನೇ ಕಳೆದುಕೊಂಡು ಪುಟಾಣಿ ಮಕ್ಕಳು..!
ಗುಂಡ್ಲುಪೇಟೆ: ಸೀಬೆಹಣ್ಣಿನ ಆಸೆಗಾಗಿ ಇಬ್ಬರು ಅಕ್ಕತಂಗಿಯರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ದುರ್ಘಟನೆ ನಡೆದಿರೋದು ಮೈಸೂರು ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಕೆಬ್ಬೇಪುರ ಗ್ರಾಮದಲ್ಲಿ. ಗ್ರಾಮದ ರೇಚಪ್ಪ ಹಾಗೂ ವೇದ ದಂಪತಿ ಪುತ್ರಿಯರಾದ ಹದಿನಾಲ್ಕು ವರ್ಷದ ಪೂಜಿತ ಹಾಗೂ ಹನ್ನೆರಡು ವರ್ಷದ ಪುಣ್ಯ ಸಾವನ್ನಪ್ಪಿದ ಬಾಲಕಿಯರು.
ಇಬ್ಬರು ತಮ್ಮ ಜಮೀನಿನಲ್ಲಿದ್ದ ಸೀಬೆಹಣ್ಣಿನ ಗಿಡದಿಂದ ಸೀಬೆಹಣ್ಣು ಕೀಳಲು ಹೋಗಿದ್ದಾರೆ. ಈ ವೇಳೆ ಜಾರಿ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಪೂಜಿತಾ 8ನೇ ತರಗತಿಯಲ್ಲಿ ಓದುತ್ತಿದ್ದರೆ, ಪುಣ್ಯ 6ನೇ ತರಗತಿಯಲ್ಲಿ ಓದುತ್ತಿದ್ದರು. ಇವರ ಕುಟುಂಬ ಜಮೀನನಲ್ಲೇ ಇರುವ ಮನೆಯಲ್ಲಿ ವಾಸವಿತ್ತು. ಇಂದು ಶಾಲೆಗೆ ರಜೆ ಇದ್ದಿದ್ದರಿಂದ ಸೀಬೆಹಣ್ಣು ಕೀಳಲು ಹೋಗಿದ್ದರು. ಇಬ್ಬರು ಬಾಲಕಿಯರ ಮೃತ ದೇಹಗಳನ್ನು ಕೃಷಿ ಹೊಂಡದಿಂದ ಮೇಲಕ್ಕೆ ಎತ್ತಲಾಗಿದ್ದು, ಈ ವೇಳೆ ಪೋಷಕರು ಹಾಗು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.