Districts

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ವಿಚಾರ; ಬ್ಲ್ಯೂಟೂತ್‌ ಬಳಸಿ ಅಕ್ರಮ ಅನುಮಾನ

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಬ್ಲ್ಯೂಟೂತ್‌ ಬಳಸಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ. ಸಿಐಡಿ ಅಧಿಕಾರಿಗಳು ಇಬ್ಬರು ಅಭ್ಯರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಅದರಲ್ಲಿ ಕಲಬುರಗಿಯ ವಿಶಾಲ್‌ ಶಿರೂರ್‌ ಕೂಡಾ ಒಬ್ಬರು. ಹಗರಣದ ಕೇಂದ್ರ ಸ್ಧಾನ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲೇ ಈತ ಕೂಡಾ ಪರೀಕ್ಷೆ ಬರೆದಿದ್ದ.

ಅಭ್ಯರ್ಥಿ ವಿಶಾಲ್ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿದ ಉತ್ತರ ಬರೆದ ಅನುಮಾನವಿದೆ. ಇಷ್ಟು ದಿನ ಒಎಂಆರ್ ಶೀಟ್‌ನಲ್ಲಿ ಅಕ್ರಮ ನಡೆಸಿದ ಬಗ್ಗೆ ಅನುಮಾನವಿತ್ತು. ಆದ್ರೆ, ತನಿಖೆ ಈಗ ಮತ್ತೊಂದು ಮಜಲಿಗೆ ಬದಲಾಗಿದೆ. ಪರೀಕ್ಷಾ ಕೇಂದ್ರದ ಒಳಗೆ ಎಲೆಕ್ಟ್ರಾನಿಕ್ ಉಪಕರಣ ಬಳಸಿದ ವಿಷಯ ಹೊರಬಿದ್ದ ತಕ್ಷಣ ತನಿಖೆಯನ್ನು ಮತ್ತಷ್ಟು ಆಯಾಮಗಳಲ್ಲಿ ಚುರುಕುಗೊಳಿಸಲಾಗಿದೆ. ಇನ್ನು ಗುರುವಾರ ಬಂಧಿಸಲಾದ ಶಾಸಕ ಎಂ.ವೈ.ಪಾಟೀಲ ಅವರ ಗನ್‌ಮ್ಯಾನ್ ಹಯ್ಯಾಳಿ ದೇಸಾಯಿಗೆ ಸಹಾಯ ಮಾಡಿದ ಅಫಜಲಪುರದ ಶರಣಬಸಪ್ಪ ಎಂಬಾತನನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.

Share Post