ಸಂತೋಷ್ ಆತ್ಮಹತ್ಯೆ ಪ್ರಕರಣ; ಈಶ್ವರಪ್ಪ ಅವರ ರಾಜೀನಾಮೆ ಪಡೆಯಲ್ಲ – ಸಿಎಂ ಬೊಮ್ಮಾಯಿ
ಬೆಂಗಳೂರು: ನಲವತ್ತು ಪರ್ಸೆಂಟ್ ಕಮೀಷನ್ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ್ ಪ್ರಕರಣ ಸಂಬಂಧ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದ ಪ್ರಾಥಮಿಕ ವರದಿ ಅನ್ವಯ ಕ್ರಮ ಕೈಗೊಳ್ಳುತ್ತೇವೆ. ತನಿಖೆಯಲ್ಲಿ ಸರ್ಕಾರ ಮಧ್ಯೆ ಪ್ರವೇಶ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ ಈ ಸಂಬಂಧ ಈಶ್ವರಪ್ಪ ಅವರ ರಾಜೀನಾಮೆ ಪಡೆಯುವ ಅವಶ್ಯಕತೆ ಇಲ್ಲ ಎಂದೂ ಸಿಎಂ ಹೇಳಿದ್ದಾರೆ.
ಸಚಿವ ಈಶ್ವರಪ್ಪ ಅವರ ಹೆಸರು ಉಲ್ಲೇಖಿಸಿರುವುದರಿಂದ ಈಶ್ವರಪ್ಪ ವಜಾ ಮಾಡಬೇಕೆಂದು ವಿಪಕ್ಷಗಳು ಆಗ್ರಹಿಸುತ್ತಿವೆ. ಈ ಬೆನ್ನಲ್ಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಿಎಂ ಬೊಮ್ಮಾಯಿ, ವ್ಯವಸ್ಥಿತವಾಗಿ ಏನೇನು ತನಿಖೆಯಾಗಬೇಕೋ ಅದು ಆಗುತ್ತದೆ. ಕಾನೂನು ರೀತಿ ಏನೇನು ಪರಿಶೀಲನೆ ಆಗಬೇಕೋ ಆಗುತ್ತದೆ. ಕಮೀಷನ್ ಆರೋಪದ ಹಿನ್ನೆಲೆಯಲ್ಲಿ ಸಂತೋಷ್ ವಿರುದ್ಧ ಈಶ್ವರಪ್ಪ ಅವರು ಮಾನನಷ್ಟ ಮೊಕದ್ದಮೆ ಹಾಕಿದ್ದರು. ಈ ಎಲ್ಲಾ ಅಂಶಗಳು ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.