Bengaluru

ಆರು ಶಾಲೆಗಳಲ್ಲಿ ಬಾಂಬ್‌ ಇಟ್ಟಿರುವುದಾಗಿ ಬೆದರಿಕೆ; ಇ-ಮೇಲ್‌ ಆಧರಿಸಿ ಪರಿಶೀಲನೆ

ಬೆಂಗಳೂರು: ಆರು ಶಾಲೆಗಳಲ್ಲಿ ಬಾಂಬ್‌ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್‌ ಒಂದು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಇ-ಮೇಲ್‌ ಆಧರಿಸಿ ಶಾಲೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಬೆದರಿಕೆ ಇ-ಮೇಲ್‌ ಬಂದಿದೆ.  ಪವರ್‌ಫುಲ್‌ ಬಾಂಬ್‌ ಒಂದನ್ನು ಇಟ್ಟಿದ್ದೇವೆ ಎಂದು ಇ-ಮೇಲ್‌ನಲ್ಲಿ ಬರೆಯಲಾಗಿದೆ. ವರ್ತೂರು ಠಾಣಾ ವ್ಯಾಪ್ತಿಯ ಡೆಲ್ಲಿ ಪಬ್ಲಿಕ್‌ ಶಾಲೆ, ಗೋವಿಂದಪುರ ವ್ಯಾಪ್ತಿಯ ಇಂಡಿಯನ್‌ ಪಬ್ಲಿಕ್‌ ಶಾಲೆ,ಮಹದೇವಪುರದ ಗೋಪಾಲನ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌, ಹೆಣ್ಣೂರು ಬಳಿಯ ಸೇಂಟ್‌ ವಿನ್ಸೆಂಟ್‌ ಪೌಲ್‌ ಶಾಲೆ ಹಾಗೂ ಮಾರತ್ತಳ್ಳಿ ನ್ಯೂ ಅಕಾಡೆಮಿ ಶಾಲೆಯಲ್ಲಿ ಬಾಂಬ್‌ ಇಟ್ಟಿರುವುದಾಗಿ ಬೆದರಿಕೆ ಹಾಕಲಾಗಿದೆ.

ಇದು ಸುಳ್ಳಲ್ಲ. ಪವರ್‌ ಫುಲ್‌ ಬಾಂಬ್‌ ಇಡಲಾಗಿದೆ. ಕೂಡಲೇ ಹೋಗಿ ನೂರಾರು ಮಂದಿಯನ್ನು ರಕ್ಷಿಸಿ ಎಂದು ಮೇಲ್‌ನಲ್ಲಿ ಹೇಳಲಾಗಿದೆ.  ಮಲಿಂದ ಬೋರೆನ್‌ ಎಂಬುವವರ ಹೆಸರಿನಿಂದ ಈ ಇ-ಮೇಲ್‌ ಬಂದಿದೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಉಲ್ಲೇಖಿಸಿರುವ ಶಾಲೆಗಳಿಗೆ ಪೊಲೀಸರು, ಬಾಂಬ್‌ ಸ್ಕ್ವಾಡ್‌ ಹಾಗೂ ಡಾಗ್‌ ಸ್ಕ್ವಾಡ್‌ ಭೇಟಿ ನೀಡಿದೆ. ಶಾಲೆಗಳಲ್ಲಿದ್ದ ಎಲ್ಲರನ್ನೂ ಹೊರಗೆ ಕಳುಹಿಸಿ, ಶಾಲೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಇ-ಮೇಲ್‌ ಎಲ್ಲಿಂದ ಬಂತು, ಕಳುಹಿಸಿದವರು ಯಾರು..? ಇದರ ಹಿಂದೆ ಯಾರಿದ್ದಾರೆ..? ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ.

Share Post