ಹೊಗೆ ಬಂದಿದ್ದರಿಂದ ವಿಮಾನ ತುರ್ತು ಭೂಸ್ಪರ್ಶ; ಧರೆಗಿಳಿಯುತ್ತಿದ್ದಂತೆ ಎರಡು ತುಂಡಾದ ವಿಮಾನ
ಸ್ಯಾನ್ ಜೋಸ್: ಸರಕು ಸಾಗಣೆ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ತುರ್ತು ಭೂಸ್ಪರ್ಶ ಮಾಡಲಾಗಿದ್ದು, ಈ ವೇಳೆ ವಿಮಾನ ಎರಡು ತುಂಡಾಗಿರುವ ಘಟನೆ ಕೋಸ್ಟರಿಕಾದ ಸ್ಯಾನ್ ಜೋಸ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಿಮಾನ ರನ್ವೇನಿಂದ ಸೈಡ್ಗೆ ಹೋಗಿದ್ದರಿಂದಾಗಿ ಅದು ತುಂಡಾಗಿದೆ ಎಂದು ತಿಳಿದುಬಂದಿದೆ.
ಕಾರ್ಗೋ ಸೇವೆ ಒದಗಿಸುವ ಜರ್ಮನ್ನ ಡಿಎಚ್ಎಲ್ ಕಂಪನಿಗೆ ಸೇರಿದ ವಿಮಾನ ಇದಾಗಿದ್ದು, ವಿಮಾನ ರನ್ವೇಯಲ್ಲಿ ಇಳಿಯುವಾಗ ಪಕ್ಕಕ್ಕೆ ಸರಿದು ಎರಡು ತುಂಡಾಗಿದೆ. ಆದ್ರೆ ಪೈಲಟ್ ಸೇರಿ ವಿಮಾನದಲ್ಲಿದ್ದ ಇಬ್ಬರೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಬೋಯಿಂಗ್-757 ಸರಕು ಸಾಗಣೆ ವಿಮಾನ ಸ್ಯಾನ್ ಜೋಸ್ನ ಹೊರಗಿನ ಜುವಾನ್ ಸಾಂತಾಮಾರಿಯಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು. ಬೆಳಿಗ್ಗೆ 10:30ರ ಸುಮಾರಿಗೆ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ, ಹೊಗೆ ಕಾಣಿಸಿಕೊಂಡಿದೆ. ಕೂಡಲೇ ತುರ್ತು ಲ್ಯಾಂಡಿಂಗ್ಗೆ ಮುಂದಾದಾಗ ಈ ಅಪಘಾತ ಸಂಭವಿಸಿದೆ.