ರಾಜ್ಯದಲ್ಲಿ ಕೋಕಾ ಪ್ರಕರಣದ ಮೊದಲ ತೀರ್ಪು; ಆರ್.ಎನ್.ನಾಯಕ ಕೊಲೆ ಆರೋಪಿಗಳು ದೋಷಿಗಳು
ಬೆಳಗಾವಿ: ರಾಜ್ಯದಲ್ಲಿ ಕೋಕಾ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದ ಮೊದಲ ತೀರ್ಪು ಪ್ರಕಟವಾಗಿದೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಉದ್ಯಮಿ ಆರ್.ಎನ್. ನಾಯಕ ಕೊಲೆ ಪ್ರಕರಣ ಬೆಳಗಾವಿ ಕೋಕಾ ನ್ಯಾಯಾಲಯ ತೀರ್ಪು ನೀಡಿದೆ. ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 9 ಮಂದಿಯನ್ನು ದೋಷಿಗಳು ಎಂದು ಹೇಳಿದ್ದು, ಏಪ್ರಿಲ್ 4 ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದೆ.
ಈ ಪ್ರಕರಣದ 6, 11 ಹಾಗೂ 16ನೇ ಆರೋಪಿಗಳನ್ನು ನಿರ್ದೋಷಿಗಳು ಎಂದು ಕೋರ್ಟ್ ಹೇಳಿದ್ದು, ಕೇರಳದ ರಬ್ದಿನ್ ಫಿಚೈ, ಬೆಂಗಳೂರಿನ ಮಹ್ಮದ್ ಶಾಬಂದರಿ ಹಾಗೂ ಉತ್ತರ ಕನ್ನಡದ ಆನಂದ ರಮೇಶ್ ನಾಯಕ ದೋಷಮುಕ್ತರಾಗಿದ್ದಾರೆ. ಎರಡನೇ ಆರೋಪಿ ಉತ್ತರ ಪ್ರದೇಶ ಮೂಲದ ಜಗದೀಶ್ ಪಟೇಲ್, ಮೂರನೇ ಆರೋಪಿ ಬೆಂಗಳೂರಿನ ಅಭಿ ಭಂಡಗಾರ, ನಾಲ್ಕನೇ ಆರೋಪಿ ಉಡುಪಿಯ ಗಣೇಶ ಭಜಂತ್ರಿ, ಐದನೇ ಆರೋಪಿ ಕೇರಳದ ಕೆ.ಎಂ ಇಸ್ಮಾಯಿಲ್, ಏಳನೇ ಆರೋಪಿ ಹಾಸನದ ಮಹೇಶ ಅಚ್ಚಂಗಿ, ಎಂಟನೇ ಆರೋಪಿ ಕೇರಳದ ಸಂತೋಷ ಎಂ.ಬಿ, ಒಂಬತ್ತನೇ ಆರೋಪಿ ಉಡುಪಿ ಮೂಲದ ಬನ್ನಂಜೆ ರಾಜಾ, ಹತ್ತನೇ ಆರೋಪಿ ಬೆಂಗಳೂರಿನ ಜಗದೀಶ್ ಚಂದ್ರರಾಜ್, 12 ಆರೋಪಿ ಉತ್ತರ ಪ್ರದೇಶದ ಅಂಕಿತಕುಮಾರ್ ಕಶ್ಯಪ್ ಶಿಕ್ಷೆಗೆ ಗುರಿಯಾಗಿದ್ದಾರೆ.
2013ರ ಡಿಸೆಂಬರ್ 21ರಂದು ಅಂಕೋಲಾದಲ್ಲಿ ಆರ್.ಎನ್.ನಾಯಕ ಕೊಲೆ ನಡೆದಿತ್ತು. ಈ ಸಂಬಂಧ ಆರೋಪಿಗಳ ವಿರುದ್ಧ ಕೋಕಾ ಕೇಸ್ ದಾಖಲಿಸಲಾಗಿತ್ತು. ಇದು ರಾಜ್ಯದ ಮೊದಲ ಕೋಕಾ ಪ್ರಕರಣವಾಗಿದೆ.