ಮಾಜಿ ಪ್ರಧಾನಿ ದೇವೇಗೌಡ ಪತ್ನಿ ಚೆನ್ನಮ್ಮಗೆ ಐಟಿ ನೋಟಿಸ್
ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಆದಾಯ ತೆರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಆಸ್ತಿ ವಿವರದ ಬಗ್ಗೆ ಮಾಹಿತಿ ಕೇಳಿ ನೋಟಿಸ್ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರವನ್ನು ಅವರ ಪುತ್ರ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ದೃಢಪಡಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ನಮ್ಮ ತಾಯಿಗೆ ಐಟಿ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದಾರೆ.ಆಸ್ತಿ ವಿವರದ ಬಗ್ಗೆ ಮಾಹಿತಿ ಕೇಳಿ ನೋಟಿಸ್ ಕೊಟ್ಟಿದ್ದಾರೆ. ಒಬ್ಬರು ಮಾಜಿ ಪ್ರಧಾನಿ ಪತ್ನಿಗೆ ನೋಟಿಸ್ ಕೊಟ್ಟಿದ್ದಾರೆ. ಇದಕ್ಕೆ ನಾವು ಉತ್ತರ ಕೊಡ್ತೀವಿ. ಅಧಿಕಾರಿಗಳು ಕೋಟಿ ಕೋಟಿ ಹಣ ಮಾಡಿದ್ದಾರೆ. ಅವರಿಗೆ ಯಾರು ನೋಟಿಸ್ ಕೊಡುವವರು ಎಂದು ಪ್ರಶ್ನಿಸಿದ್ದಾರೆ.
ನಾನು ಮೊದಲು ಆಲೂಗಡ್ಡೆ ಬೆಳೆದಿದ್ದೆ, ಈಗ ಕಬ್ಬು ಬೆಳೆದಿದ್ದೇನೆ. ನನಗೆ ನೋಟಿಸ್ ಕೊಟ್ರೂ ನಾನು ಉತ್ತರ ಕೊಡ್ತೀನಿ. ಬರೀ ಜೆಡಿಎಸ್‌ನವರನ್ನು ಆಯ್ಕೆ ಮಾಡಿ ನೋಟಿಸ್ ನೀಡುವ ಕೆಲಸ ನಡೆಯುತ್ತಿದೆ. ನಾವು ಆಸ್ತಿ ಮಾಡಬೇಕು ಎಂದಿದ್ದರೆ ಎಷ್ಟೆಲ್ಲಾ ಆಸ್ತಿ ಮಾಡಬಹುದಿತ್ತು ಎಂದು ರೇವಣ್ಣ ಪ್ರಶ್ನಿಸಿದ್ದಾರೆ.