National

ಯುಪಿ ಸಿಎಂ ಆಗಿ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕಾರ : ಮಧುವಣಗಿತ್ತಿಯಂತೆ ಸಿಂಗಾರಗೊಂಡ ವಾಜಪೇಯಿ ಸ್ಟೇಡಿಯಂ

ಲಕ್ನೋ: ಯೋಗಿ ಆದಿತ್ಯ ನಾಥ್ ಅವರು ಇಂದು ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಸಂಜೆ 4 ಗಂಟೆಗೆ ಯೋಗಿ ಆದಿತ್ಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ರಾಜ್ಯಪಾಲ ಆನಂದಿ ಬೆನ್ ಪಟೇಲ್  ಅವರು ಯೋಗಿ ಆದಿತ್ಯನಾಥ್‌ ಅವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.

ಯೋಗಿ ಜೊತೆಗೆ ಹಲವು ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಯೋಗಿ ಸಂಪುಟದಲ್ಲಿ 60 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. 25-30 ಮಂದಿ ಹೊಸಬರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ. 37 ವರ್ಷಗಳ ನಂತರ ಬಿಜೆಪಿ ಸತತ ಎರಡನೇ ಬಾರಿಗೆ ಸರ್ಕಾರ ರಚಿಸಲಿದೆ.

ಪ್ರಧಾನಿ ಮೋದಿ, ಜೆಪಿ ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಅನುರಾಗ್ ಠಾಗೋರ್, ಧರ್ಮೇಂದ್ರ ಪ್ರಧಾನ್, ಸ್ಮೃತಿ ಇರಾನಿ, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕೀಯ ಮತ್ತು ಕೈಗಾರಿಕಾ ಗಣ್ಯರು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಖಿಲೇಶ್, ಮುಲಾಯಂ, ಮಾಯಾವತಿ, ರಾಹುಲ್, ಪ್ರಿಯಾಂಕಾ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಬಿಜೆಪಿ ಆಹ್ವಾನ ಕಳುಹಿಸಿದೆ.

‘ನಯಾ ಭಾರತ್ ಕಾ ನಯಾ ಯುಪಿ’ ಹೆಸರಿನಲ್ಲಿ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ಸಜ್ಜಾಗಿದೆ. ಯೋಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ 85,000 ಮಂದಿ ಆಗಮಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 403 ಸ್ಥಾನಗಳ ಪೈಕಿ 255 ಸ್ಥಾನಗಳನ್ನು ಬಿಜೆಪಿ ಗೆದ್ದು ಅಧಿಕಾರ ರಚನೆಗೆ ಮುಂದಾಗಿದೆ.

ಇನ್ನೂ ಸ್ಟೇಡಿಯಂ ಸುತ್ತ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ. ಪ್ರಧಾನಿ ಮೋದಿ ಸೇರಿದಂತೆ ದೊಡ್ಡ ದೊಡ್ಡ ರಾಜಕೀಯ ಗಣ್ಯರ ಉಪಸ್ಥಿತಿ ಹಿನ್ನೆಲೆಯಲ್ಲಿ ಭದ್ರತೆ ಕುಂದುಂಟಾಗದಂತೆ ವ್ಯವಸ್ಥೆ ಮಾಡಲಾಗಿದೆ.  ಬೃಹತ್‌ ಆಸನ ವ್ಯವಸ್ಥೆ ಮಾಡಲಾಗಿದೆ. ಅದ್ದೂರಿ ವೇದಿಕೆಯನ್ನು ಬಣ್ಣಬಣ್ಣದ ಹೂಗಳಿಂದ ಸಿಂಗಾರ ಮಾಡಲಾಗಿದೆ. ಬೃಹತ್‌ ಲೈಟಿಂಗ್‌ ವ್ಯವಸ್ಥೆ ಕೂಡ ಮಾಡಲಾಗಿದೆ.

Share Post