ಟ್ರಾನ್ಸ್‌ಫಾರ್ಮರ್ ಸ್ಫೋಟ; ತಾಯಿ-ಮಗಳಿಗೆ ಗಂಭೀರ ಗಾಯ
ಬೆಂಗಳೂರು: ಕಲ್ಯಾಣ ಮಂಟಪ ಬುಕ್ ಮಾಡಲು ಹೋಗಿದ್ದ ತಂದೆ-ಮಗಳು ವಿದ್ಯುತ್ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗನಹಳ್ಳಿಯಲ್ಲಿ ನಡೆದಿದೆ.
ಯುವತಿ ಚೈತನ್ಯ(25), ಅವರ ತಂದೆ ಶಿವರಾಜ್(55) ತೀವ್ರವಾಗಿ ಗಾಯಗೊಂಡವರು. ಕೆಲವೇ ದಿನಗಳಲ್ಲಿ ಶಿವರಾಜ್ ಮಗಳ ಮದುವೆ ಇತ್ತು. ಈ ಕಾರಣದಿಂದಾಗಿ ತಂದೆ-ಮಗಳು ಕಲ್ಯಾಣ ಮಂಟಪ ಬುಕ್ ಮಾಡಲು ಸ್ಕೂಟಿಯಲ್ಲಿ ನೈಸ್‌ರಸ್ತೆಯ ಮಂಗನಹಳ್ಳಿ ಬಳಿ ಹೋಗುತ್ತಿದ್ದರು. ಇದೇ ವೇಳೆ ರಸ್ತೆ ಬದಿ ಇದ್ದ ವಿದ್ಯುತ್ ಪರಿವರ್ತಕ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಶಿವರಾಜ್ ಹಾಗೂ ಚೈತನ್ಯರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ರಸ್ತೆ ಮೇಲೆ ಒದ್ದಾಡುತ್ತಿದ್ದ ಇಬ್ಬರನ್ನೂ ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.